ಹುಬ್ಬಳ್ಳಿ: ಮೇ 1 ರಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಹುಬ್ಬಳ್ಳಿಗೆ ಆಗಮಿಸಿ ನೇಹಾ ಹಿರೇಮಠ ಅವರ ನಿವಾಸಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಲಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಇಂದು ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ನೇಹಾ ಕುಟುಂಬಕ್ಕೆ ನ್ಯಾಯ ಸಿಗಬೇಕು. ಹತ್ಯೆ ಮಾಡಿರುವ ಯುವಕನ ತನಿಖೆ ಮಾಡುತ್ತಿರುವ ಅಧಿಕಾರಿಗಳು ಸರಿಯಾದ ಮಾಹಿತಿ ಕಲೆ ಹಾಕಬೇಕು. ಆತನ ಹಿಂದೆ ಯಾರು ಇದ್ದಾರೆ, ಯಾರ ಕೈವಾಡವಿದೆ ಅನ್ನೋದನ್ನ ಪತ್ತೆ ಹಚ್ಚಬೇಕು. ಹತ್ಯೆಗೆ ಯಾರು ಪ್ರೇರಣೆ ಕೊಟ್ಟಿದ್ದಾರೋ ಅವರಿಗೂ ಶಿಕ್ಷೆಯಾಗಬೇಕು.
ನಮ್ಮ ಪಕ್ಷದ ಮುಖಂಡರು, ಸ್ವಾಮೀಜಿಗಳು ಅನೇಕ ರಾಜಕೀಯ ಮುಖಂಡರು ಟ್ರೇಡ್ ಯುನಿಯನ್ನವರು ಕೂಡ ಬಂದು ಸಾಂತ್ವನ ಹೇಳಿದ್ದಾರೆ. ಅಮಿತ್ ಶಾ ಕೂಡ ನೇಹಾ ಮನೆಗೆ ಭೇಟಿ ನೀಡಲಿದ್ದಾರೆ. ಕಾಲೇಜ್ ಕ್ಯಾಂಪಸ್ ಒಳಗೆ ಇಂತಹ ಕೃತ್ಯ ನಡೆದಿದ್ದು, ಮುಂದೆ ಹೀಗೆ ಆಗದಂತೆ ಸ್ಪೆಷಲ್ ಆ್ಯಕ್ಟ್ ಜಾರಿಗೆ ತರಬೇಕು ಆಗ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದಾಗಿದೆ.
ಇಂತಹ ಘಟನೆಗಳು ನಡೆದಾಗ ಎಲ್ಲರೂ ಬಂದು ಸಾಂತ್ವನ ಹೇಳುತ್ತಾರೆ. ಆದ್ರೆ ಇದಕ್ಕೆ ರಾಜಕಾರಣ ಎಂಬ ಶಬ್ದವನ್ನು ಕಾಂಗ್ರೆಸ್ ಬಳಸಬಾರದು. ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆಯಾಗಿದೆ. ಘಟನೆ ಆದ ನಂತರ ಹತ್ಯೆಯ ಬಗ್ಗೆ ವಿಚಾರ ಮಾಡಿ ಸ್ಟೇಟಮೆಂಟ್ ಕೊಡಬೇಕಿತ್ತು. ಆದ್ರೆ ಸಿದ್ದರಾಮಯ್ಯನವರು ಗೃಹಸಚಿವರು ಆ ರೀತಿ ಹೇಳಿಕೆ ಕೊಡಬಾರದಿತ್ತು. ನಂತರ ಅವರ ಮನೆಗೆ ಬಂದು ಸಾಂತ್ವನ ಹೇಳಿ ಕ್ಷಮೆಯಾಚಿಸಿದ್ದಾರೆ.
ಸಿಐಡಿ ಅಧಿಕಾರಿಗಳು ಪಕ್ಷಾತೀತವಾಗಿರುತ್ತಾರೆ. ನ್ಯಾಯ ಕೊಡಿಸುವ ದೃಷ್ಟಿಯಿಂದಲೇ ಸಿಎಂ ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ. ಹಾಗಾಗಿ ಯಾರಿಗೂ ಇದರಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಇರಲ್ಲ. ಅಮಿತ್ ಶಾ ಬಂದಾಗ ಈ ಬಗ್ಗೆ ಇನ್ನೂ ಚರ್ಚೆ ಮಾಡಿ ಮುಂದಿನ ತನಿಖೆ ಬಗ್ಗೆ ಹೇಗೆ ಅನ್ನೋದನ್ನ ತಿಳಿಸುತ್ತೇವೆ. ಸದ್ಯ ತನಿಖೆ ನಡೆಯುತ್ತಿದೆ. ತನಿಖೆ ನಮಗೆ ಸಮರ್ಪಕವಾಗಿಲ್ಲ ಅನಿಸಿದ್ರೆ ಮುಂದೆ ಹೋರಾಟ ಮಾಡುತ್ತೇವೆ ಎಂದು ನಿರಾಣಿ ಹೇಳಿದರು.
ಇದನ್ನೂ ಓದಿ: 'ನೇಹಾ ಕುಟುಂಬದ ಜೊತೆ ನಾವಿದ್ದೇವೆ, ಬಿಜೆಪಿ ರಾಜಕೀಯ ಮಾಡುತ್ತಿದೆ': ವಿದ್ಯಾರ್ಥಿನಿ ನಿವಾಸಕ್ಕೆ ಸಿಎಂ ಭೇಟಿ - CM Siddaramaiah