ಬೆಂಗಳೂರು: ನಾಡಗೀತೆಯನ್ನು ಎಲ್ಲಾ ಶಾಲೆಗಳಲ್ಲಿ ಹಾಡುವಂತೆ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ತಿದ್ದುಪಡಿ ಮಾಡಿ ಮರು ಆದೇಶ ಹೊರಡಿಸಿದೆ.
ಈ ಮುಂಚೆ ಇಲಾಖೆ ಎಲ್ಲಾ ಶಾಲೆಗಳು ಎಂದು ಉಲ್ಲೇಖಿಸುವ ಬದಲು ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡಬೇಕು ಎಂದು ತಿದ್ದುಪಡಿ ಆದೇಶ ಹೊರಡಿಸಿ ಎಡವಟ್ಟು ಮಾಡಿತ್ತು.
ಈ ಸಂಬಂಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕನ್ನಡ ವಿರೋಧಿ ನಿಲುವು ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಒಂದು ಸಣ್ಣ ಪ್ರಿಂಟ್ ಮಿಸ್ಟೇಕ್ನಿಂದ ಸಮಸ್ಯೆ ಆಗಿದೆ. ನೋಟ್ ಶೀಟ್ನಲ್ಲಿ ಎಲ್ಲಾ ಶಾಲೆಗಳು ಎಂದಿದೆ. ಅದು ಮುದ್ರಣ ಮಿಸ್ಟೇಕ್ ಆಗಿದೆ. ಅದನ್ನು ಸರಿಪಡಿಸಿ ಮರು ಆದೇಶ ಹೊರಡಿಸಲಾಗುವುದು. ನಮಗೆ ಎಲ್ಲಾ ಶಾಲೆಗಳು ಒಂದೇ. ಆದೇಶ ಮಾಡಬೇಕಾದ್ರೆ ಸರ್ಕಾರಿ ಶಾಲೆ ಅನುದಾನಿತ ಶಾಲೆ ಅಂತಾ ಹಾಕಿದ್ದಾರೆ. ತಿದ್ದುಪಡಿ ಆದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ನಾಡಗೀತೆ ಅಂತಾ ಹಾಕಿಸುತ್ತೇವೆ ಎಂದಿದ್ದರು.
ಇದೀಗ ತಿದ್ದುಪಡಿ ಮಾಡಿ ಮರು ಆದೇಶ ಹೊರಡಿಸಿದ ಇಲಾಖೆ, ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವಂತೆ ಆದೇಶಿಸಿದೆ. ತಿದ್ದುಪಡಿ ಮರು ಆದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು" ಎಂದು ತಿದ್ದಿ ಓದಿಕೊಳ್ಳಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: 'ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ' ಆದೇಶದಲ್ಲಿ ಪ್ರಿಂಟ್ ಮಿಸ್ಟೇಕ್ ಆಗಿತ್ತು: ಸಚಿವ ತಂಗಡಗಿ ಸ್ಪಷ್ಟನೆ