ಬೆಂಗಳೂರು: ನಕಲಿ ದಾಖಲೆಗಳ ಸೃಷ್ಟಿಗೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಯೂ ಸಹ ಕ್ರಿಮಿನಲ್ ದೂರು ದಾಖಲಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಾಸಂತಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ನಿವಾಸಿಯೊಬ್ಬರ ನಿವೇಶನ ಜಗಳದಲ್ಲಿ ನಕಲಿ ದಾಖಲೆಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಅದರ ವಿರುದ್ಧ ಮೂಲ ದೂರುದಾರರಿಗೆ ಕ್ರಿಮಿನಲ್ ಕೇಸ್ ದಾಖಲಿಸಲು ಹಕ್ಕಿಲ್ಲ, ನ್ಯಾಯಾಲಯಕ್ಕೆ ಮಾತ್ರ ಹಕ್ಕಿದೆ ಎಂದು ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ, ನ್ಯಾಯಾಲಯ ಅವರ ವಾದವನ್ನು ತಿರಸ್ಕರಿಸಿ, ಯಾವುದೇ ಬಾಧಿತ ವ್ಯಕ್ತಿ ಕ್ರಿಮಿನಲ್ ಕೇಸ್ ಹೂಡಬಹುದು ಎಂದು ಆದೇಶ ನೀಡಿದೆ. ಪ್ರಾಸಿಕ್ಯೂಷನ್ ಕ್ರಿಮಿನಲ್ ಕಾನೂನಿಗಳಡಿ ಎರಡು ಕೇಸುಗಳನ್ನು ಪ್ರತ್ಯೇಕವಾಗಿ ಮುಂದುವರಿಸಬಹುದು, ಇದು ಒಂದೇ ವಿಷಯದ ಬಗ್ಗೆ ಎರಡು ಪ್ರಕರಣಗಳಾಗುವುದಿಲ್ಲ ಎಂದು ಹೇಳಿದೆ.
ಅಲ್ಲದೇ, ಯಾವ ನ್ಯಾಯಾಲಯದ ಮುಂದೆ ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆಯೋ ಅಂತಹ ವ್ಯಕ್ತಿ ವಿರುದ್ಧ ಕೋರ್ಟ್ ಸಹ ಸಿಆರ್‌ಪಿಸಿ ಸೆಕ್ಷನ್ 340ರಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಪೀಠ ಆದೇಶಿಸಿದೆ.
ನ್ಯಾಯಮೂರ್ತಿ ಗೋವಿಂದರಾಜ್ ಅವರ ಸುಪ್ರೀಂಕೋರ್ಟ್ನ ಬಂಡೇಕರ್ ಬದ್ರರ್ಸ್ ಪ್ರವೈಟ್ ಲಿಮಿಟೆಡ್ ಪ್ರಕರಣದಲ್ಲಿ ಸಿಆರ್‌ಪಿಸಿ 195ರಡಿ ನಿರ್ಬಂಧವಿದೆ, ಅದರಂತೆ ಬಾಧಿತ ವ್ಯಕ್ತಿಯು ಕ್ರಿಮಿನಲ್ ಪ್ರಕರಣ ಹೂಡಲು ಅವಕಾಶವಿದೆ. ಜತೆಗೆ ಬಾಧಿತ ವ್ಯಕ್ತಿ ಖಾಸಗಿ ವ್ಯಕ್ತಿಯಾಗಿದ್ದರೆ ಆತನಿಗೆ ಪೊಲೀಸ್ ಠಾಣೆಯಲ್ಲಿ ಅಥವಾ ನ್ಯಾಯಾಲಯದ ಮುಂದೆ ದೂರು ದಾಖಲಿಸಬಹುದಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣದಲ್ಲಿ ಪ್ರತಿವಾದಿ ಉಮೇಶ್ ವಿರುದ್ಧದ ಪ್ರಕರಣದಲ್ಲಿ ನಕಲಿ ದಾಖಲೆ ನೀಡಲಾಗಿದೆ, ಹಾಗಾಗಿ ಅವರಿಗೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶವಿದೆ ಎಂದು ಹೇಳಿರುವ ನ್ಯಾಯಾಲಯ ವಾಸಂತಿ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ: ತೀರ್ಥಹಳ್ಳಿ ತಾಲೂಕಿನ ಗಬಡಿ ಗ್ರಾಮದ ನಿವೇಶನ ಸಂಬಂಧ 2015ರಲ್ಲಿ ವಾಸಂತಿ ವಿರುದ್ಧ ಅದೇ ಗ್ರಾಮದ ಜಿ ಡಿ ಉಮೇಶ್ ಸ್ಥಳೀಯ ನ್ಯಾಯಾಲಯದಲ್ಲಿ ಸಿವಿಲ್ ದಾವೆ ದಾಖಲಿಸಿದ್ದರು. ಆಗ ವಾಸಂತಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಉಮೇಶ್ ಮತ್ತೊಂದು ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಅದನ್ನು ಸ್ಥಳೀಯ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ವಾಸಂತಿ, ನಕಲಿ ದಾಖಲೆಗಳ ವಿಚಾರದಲ್ಲಿ ಕೋರ್ಟ್ಗಳು ಮಾತ್ರ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬಹುದೇ ಹೊರತು ಖಾಸಗಿ ವ್ಯಕ್ತಿಯಾದ ಉಮೇಶ್ಗೆ ಆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ 2019ರಲ್ಲಿಯೇ ನಾನು ಅಧೀನ ನ್ಯಾಯಾಲಯದಲ್ಲಿದ್ದ ದಾವೆ ವಾಪಸ್ ಪಡೆದಿದ್ದೇನೆ ಎಂದು ವಾದಿಸಿದ್ದರು.