ಕಲಬುರಗಿ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪತ್ನಿ ಸಮೇತವಾಗಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು.
ಧರ್ಮಪತ್ನಿ ರಾಧಾಬಾಯಿ ಅವರೊಂದಿಗೆ ಆಗಮಿಸಿದ ಖರ್ಗೆ ಅವರು ಕಲಬುರಗಿಯ ಬಸವನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 120 ರಲ್ಲಿ ಮತದಾನ ಮಾಡಿದರು. ಅವರು ಪ್ರತಿ ಚುನಾವಣೆಗೂ ಪತ್ನಿ ಸಮೇತವಾಗಿ ಬಂದು ಮತ ಚಲಾಯಿಸುತ್ತಾರೆ.
ಖರ್ಗೆ ಅವರು ಆಗಮಿಸುತ್ತಿದ್ದಂತೆ ಮತಕೇಂದ್ರದ ಬಳಿ ಜಮಾವಣೆಗೊಂಡ ಬಡಾವಣೆಯ ಜನರು ಜೈಕಾರ ಹಾಕಿದರು. ಇದೇ ವೇಳೆ ಖರ್ಗೆ ಆತ್ಮಿಯರ ಕುಶೋಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮತದಾನ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಧರ್ಮಪತ್ನಿ ಶೃತಿ ಖರ್ಗೆಯೊಂದಿಗೆ ಮತದಾನ ಮಾಡಿದರು.
ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ಗುಂಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 26ರಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಕೂಡಾ ಇದೇ ಬೂತ್ನಲ್ಲಿ ತಮ್ಮ ಹಕ್ಕು ಚಲಾಯಿಸಿದರು.