ಹಾಸನ: ತನ್ನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳುತ್ತಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಜಯಣ್ಣ (32) ಕೊಲೆಯಾದ ವ್ಯಕ್ತಿ. ಅಣ್ಣಯ್ಯ (34) ಕೊಲೆ ಮಾಡಿದ ಆರೋಪಿ. ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ನಗರದ ಬಡಾವಣೆಯ ಪೊಲೀಸರು ರಾತ್ರಿ ಗಸ್ತಿನಲ್ಲಿರುವಾಗ ಬಸ್ತೆನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಕೊಲೆಯಾದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರು, ಅರಸೀಕೆರೆ ಮೂಲದ ತೂಬಿನಕೆರೆ ಗ್ರಾಮದ ಜಯಣ್ಣ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ, ಬಂಧಿತ ಆರೋಪಿಯು ಕೃತ್ಯದ ಬಗ್ಗೆ ಬಾಯ್ಬಿಟ್ಟಿರುವುದಾಗಿ ಎಸ್ಪಿ ಮಹಮ್ಮದ್ ಸುಜಿತಾ ಅವರು ತಿಳಿಸಿದ್ದಾರೆ.
ಕೊಲೆ ಮಾಡಿದ ಆರೋಪಿ ಅಣ್ಣಯ್ಯ ಗಂಭೀರ ಪ್ರಕರಣವೊಂದನ್ನು ಎದುರಿಸುತ್ತಿದ್ದ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಆತನ ವಿರುದ್ಧ ದೂರು ಕೂಡ ದಾಖಲಾಗಿತ್ತು. ಜಯಣ್ಣ ಸಾಕ್ಷಿದಾರರಾಗಿದ್ದ. ತನ್ನ ವಿರುದ್ಧ ಸಾಕ್ಷಿ ಹೇಳಲು ಮುಂದಾಗಿದ್ದರಿಂದ ಆರೋಪಿ ಅಣ್ಣಯ್ಯ, ರಾಜಿ ಮಾಡಿಕೊಳ್ಳುವ ನಾಟಕವಾಡಿದ್ದನು. ಅದರಂತೆ ಜಯಣ್ಣನನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದ. ಮದ್ಯಪಾನ ಮಾಡಿದ್ದ ಇಬ್ಬರು, ರೈಲ್ವೆ ಟ್ರ್ಯಾಕ್ ಮೇಲೆ ಕುಳಿತು ಮಾತುಕತೆ ನಡೆಸಿದ್ದರು.
ಈ ವೇಳೆ ಮಾತಿಗೆ ಮಾತು ಬೆಳೆದು ಅಣ್ಣಯ್ಯ ಸಿಟ್ಟಿನಲ್ಲಿ ಜಯಣ್ಣನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಜಯಣ್ಣ, ಸ್ಥಳದಲ್ಲೇ ಮೃತಪಟ್ಟಿರುವ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಮೃತದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದನು. ಈ ಬಗ್ಗೆ ಜಯಣ್ಣನ ತಾಯಿ ಹೇಳಿಕೆ ಆಧಾರ ಮೇಲೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಿದ್ದಿದೆ. ರೈಲ್ವೆ ಟ್ರ್ಯಾಕ್ನಲ್ಲಿ ಸಾವಿಗೀಡಾದ ವ್ಯಕ್ತಿಯದ್ದು ಸಹಜ ಸಾವಲ್ಲ, ಅದೊಂದು ಕೊಲೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಮಹಮ್ಮದ್ ಸುಜಿತಾ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿ ಹತ್ಯೆ: ಹು-ಧಾ ಪೊಲೀಸ್ ಕಮಿಷನರ್ ಪ್ರತಿಕ್ರಿಯೆ