ಬೆಂಗಳೂರು : ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನ ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿಐಡಿ ಘಟಕದಲ್ಲಿ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅನಿತಾ ಬಿ. ಎಸ್ ಹಾಗೂ ರಾಮಚಂದ್ರ ಭಟ್ ಎಂಬಾತನನ್ನ ಬಂಧಿಸಲಾಗಿದೆ.
![Vijayanagara Police Station](https://etvbharatimages.akamaized.net/etvbharat/prod-images/14-05-2024/21466552_thummmm.jpg)
ಆರೋಪಿಗಳ ವಿರುದ್ಧ ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನಿಲ್ ಎಂಬುವವರು ವಿಜಯನಗರ ಠಾಣೆಗೆ ದೂರು ನೀಡಿದ್ದರು. 2021ರಲ್ಲಿ ಸ್ನೇಹಿತರೊಬ್ಬರ ಮೂಲಕ ಸುನಿಲ್ ಅವರಿಗೆ ರಾಮಚಂದ್ರ ಭಟ್ ಪರಿಚಯವಾಗಿತ್ತು. 'ತನಗೆ ಬೆಂಗಳೂರಿನ ಸಿಐಡಿ ಘಟಕ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿರುವ ಅನಿತಾ ಎಂಬುವವರ ಪರಿಚಯವಿದೆ. ಅವರಿಗೆ ಕೆಪಿಎಸ್ಸಿ ಹಾಗೂ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಹಲವು ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದ್ದು, ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ' ಎಂದು ರಾಮಚಂದ್ರ ಭಟ್ ನಂಬಿಸಿದ್ದ. ಪ್ರತಿಯಾಗಿ ಅನಿತಾ ಅವರು ಕೇಳಿದಷ್ಟು ಹಣ ಹೊಂದಿಸಿ ಕೊಡಬೇಕೆಂದು ತಿಳಿಸಿದ್ದ.
ಬಳಿಕ ಅನಿತಾಳನ್ನ ಸಿಐಡಿ ಕಚೇರಿಯಲ್ಲೇ ಸುನಿಲ್ಗೆ ಭೇಟಿ ಮಾಡಿಸಿದ್ದ. ಇದೇ ವೇಳೆ, ತನ್ನ ಕಚೇರಿ, ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ ಅನಿತಾ, ಕೆಪಿಎಸ್ಸಿ ಮೂಲಕ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆ ಕೊಡಿಸುವುದಾಗಿ ಸುನಿಲ್ನನ್ನ ನಂಬಿಸಿದ್ದಳು. ಮತ್ತು ಇದಕ್ಕಾಗಿ 40 ಲಕ್ಷ ರೂ. ಹಣ ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದಳು. ಆರೋಪಿಗಳ ಸಂಚು ಅರಿಯದ ಸುನಿಲ್, 2021ರ ಡಿಸೆಂಬರ್ ಹಾಗೂ 2022ರ ಫೆಬ್ರವರಿಯಲ್ಲಿ ಆರೋಪಿಗಳಿಗೆ ಹಂತ ಹಂತವಾಗಿ 40 ಲಕ್ಷ ರೂ. ನೀಡಿದ್ದರು.
ಆದರೆ, ನಂತರದಲ್ಲಿ ಸುನಿಲ್ ಅವರಿಗೆ ಯಾವುದೇ ಸರ್ಕಾರಿ ಕೆಲಸವನ್ನ ಕೊಡಿಸಿರಲಿಲ್ಲ. ಹಣ ವಾಪಸ್ ಹಿಂತಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಜಯನಗರ ಠಾಣೆಗೆ ಸುನಿಲ್ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳಿಬ್ಬರೂ ಇದೇ ಮಾದರಿಯಲ್ಲಿ ಇನ್ನೂ ಕೆಲವರಿಂದ ಸುಮಾರು 1 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಸರ್ಕಾರಿ ನೌಕರಿ ಆಮಿಷವೊಡ್ಡಿ ವಂಚನೆ ಪ್ರಕರಣ: ಒಳಾಡಳಿತ ಇಲಾಖೆಯ ಇಬ್ಬರು ನೌಕರರ ಬಂಧನ