ಬೆಂಗಳೂರು: ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಭದ್ರನಗರದ ಬಸ್ ನಿಲ್ದಾಣ ಬಳಿ ಪ್ರತಿಷ್ಠಾಪಿಸಲಾಗಿದ್ದ ಲಿಂಗೈಕ್ಯ ಶಿವಕುಮಾರ ಸ್ಚಾಮೀಜಿ ಅವರ ಪುತ್ಥಳಿಯನ್ನು ವಿರೂಪಗೊಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯ ನಿವಾಸಿ ಶಿವಕುಮಾರ್ ಅಲಿಯಾಸ್ ರಾಜ್ ವಿಷ್ಣು (34) ಬಂಧಿತ ಆರೋಪಿ. ಜಯಜರ್ನಾಟಕ ಜನಪರ ವೇದಿಕೆ ಸಂಘಟನೆಯು ಐದು ವರ್ಷಗಳ ಹಿಂದೆ ವೀರಭದ್ರನಗರ ಬಸ್ ನಿಲ್ದಾಣ ಬಳಿ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿತ್ತು. ಪುತ್ಥಳಿ ನಿರ್ವಹಣೆಯನ್ನು ಸಂಘಟನೆ ಮಾಡುತಿತ್ತು. ಕಳೆದ ನ.30 ರಂದು ದ್ವಿಚಕ್ರವಾಹನದಲ್ಲಿ ಅಪರಿತ ವ್ಯಕ್ತಿ ಬಂದು ಪುತ್ಥಳಿಯನ್ನು ವಿರೂಪಗೊಳಿಸಿದ್ದ. ಈ ಸಂಬಂಧ ಸಂಘಟನೆ ಅಧ್ಯಕ್ಷ ಪರಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್, ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದ. ಕ್ರೈಸ್ತ ಧರ್ಮದಿಂದ ಪ್ರಭಾವಿತಗೊಂಡು 7 ವರ್ಷಗಳ ಹಿಂದೆ ಮತಾಂತರಗೊಂಡಿದ್ದ. ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ಮೇಲೆ ಹಗೆತನ ಸಾಧಿಸುತ್ತಿದ್ದ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರಿಂದ ಶಿವಕುಮಾರ್ ಸ್ವಾಮೀಜಿಯ ಪುತ್ಥಳಿ ಕಂಡಿದ್ದಾನೆ. ವಿರೂಪಗೊಳಿಸುವ ಉದ್ದೇಶದಿಂದಲೇ ಮನೆಗೆ ತೆರಳಿ ಸುತ್ತಿಗೆ ತಂದು ನ.30ರ ಮಧ್ಯರಾತ್ರಿ ಸ್ಬಾಮೀಜಿ ಮುಖ ವಿರೂಪಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
"ಕೃತ್ಯವೆಸಗಿದ ಬಳಿಕ ತಮ್ಮ ಮನೆಯ ಏರಿಯಾದಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮ ಇರುವ ಬಗ್ಗೆ ಹಾಕಲಾಗಿದ್ದ ಬ್ಯಾನರ್ಗೆ ಕಲ್ಲು ಎಸೆದು ಹರಿದು ಹಾಕಿದ್ದ. ಕ್ರೈಸ್ತ ಧರ್ಮದ ಪ್ರಚಾರ ಮಾಡುತ್ತಿದ್ದ ಆರೋಪಿ ಭಿತ್ತಿಪತ್ರ ಹಂಚುತ್ತಿದ್ದ. ಭಿತ್ತಿಪತ್ರದಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ನೇರವಾಗಿ ಬೈಬಲ್ ಸಿಗುವಂತೆ ಲಿಂಕ್ ಕೊಟ್ಟಿದ್ದ" ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಸತೀಶ ಜಾರಕಿಹೊಳಿಗೆ ನಿಂದನೆ: ಆರೋಪಿ ಬಂಧನ