ಬೆಂಗಳೂರು: ಇಂದಿನ ಹೈಟೆಕ್ ಯುಗದಲ್ಲಿ ಎಲ್ಲವೂ ಆನ್ ಲೈನ್ ಮಯ. ಗೃಹೋಯೋಪಯೋಗಿ ವಸ್ತುಗಳಿಂದ ಹಿಡಿದು ದಿನಸಿ ವಸ್ತುಗಳವರೆಗೆ ಎಲ್ಲವನ್ನೂ ಆನ್ ಲೈನ್ನಲ್ಲೇ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆರ್ಡರ್ ಮಾಡಿದಷ್ಟೇ ವೇಗವಾಗಿ ವಸ್ತುಗಳನ್ನು ಮನೆಗೆ ತಲುಪಿಸಲಾಗುತ್ತಿದೆ. ಜೊತೆಗೆ ಶಾಪಿಂಗ್ ಸಂಸ್ಥೆಗಳು ಗ್ರಾಹಕರಿಗೆ ಆಕರ್ಷಕ ರೀತಿಯ ಆಫರ್ಗಳನ್ನು ನೀಡಿ ತಮ್ಮತ್ತು ಸೆಳೆಯುವುದು ಕಾಮನ್ ಆಗಿದೆ. ಕೆಲವೊಮ್ಮೆ ಆಫರ್ಗಳ ಹೆಸರಲ್ಲಿ ಸೈಬರ್ ಖದೀಮರು, ಗ್ರಾಹಕರಿಗೆ ಮೊಬೈಲ್ ಮೆಸೇಜ್ ಕಳಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ಕೂಡ ಆಗಾಗ ಬೆಳಕಿಗೆ ಬರುತ್ತಿವೆ. ಇದೇ ರೀತಿಯ ಪ್ರಕರಣ ಇದೀಗ ಬೆಂಗಳೂರಲ್ಲಿ ನಡೆದಿದೆ.
49 ರೂಪಾಯಿಗೆ 48 ಮೊಟ್ಟೆ ಸಿಗಲಿದೆ ಎಂದು ಬಂದ ಆಫರ್ ಮೆಸೇಜ್ ಲಿಂಕ್ ಒತ್ತಿ ಗ್ರಾಹಕರೊಬ್ಬರು 48,199 ರೂ. ಕಳೆದುಕೊಂಡಿರುವ ಪ್ರಕರಣ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಸಂತನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರ ಇ-ಮೇಲ್ಗೆ ಇದೇ ತಿಂಗಳು ಫೆ.17ರಂದು ಆನ್ಲೈನ್ ಶಾಪಿಂಗ್ ಕಂಪನಿಯೊಂದರಿಂದ ಸಂದೇಶ ಬಂದಿತ್ತು. ಮಹಿಳೆ ಕ್ಲಿಕ್ ಮಾಡಿ ನೋಡಿದಾಗ 48 ಮೊಟ್ಟೆಗಳಿಗೆ ಕೇವಲ 49 ರೂಪಾಯಿ ಆಫರ್ ಇರುವುದನ್ನ ಕಂಡು ಬುಕ್ ಮಾಡಲು ಮುಂದಾಗಿದ್ದರು. ಡೆಲಿವರಿ ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿ ಎಲ್ಲಾ ವಿವರಗಳನ್ನ ಭರ್ತಿ ಮಾಡಿ ಕೊನೆಗೆ ಫೇಮೆಂಟ್ ಆಪ್ಶನ್ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವಂತೆ ಸೂಚಿಸಿತ್ತು. ಹೀಗಾಗಿ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್ನ ಡಿಟೇಲ್ಸ್ ಭರ್ತಿ ಮಾಡಿ ಬಳಿಕ ಮೊಬೈಲ್ಗೆ ಬಂದ ಒಟಿಪಿ ನಂಬರ್ ನಮೂದಿಸಿ 49 ರೂಪಾಯಿ ಪಾವತಿಸಿದ್ದರು. ಇದಾದ ಕೆಲ ಕ್ಷಣಗಳಲ್ಲಿ ಮಹಿಳೆಯ ಅಕೌಂಟ್ನಿಂದ 48,199 ರೂಪಾಯಿ ಕಡಿತಗೊಂಡಿರುವ ಸಂದೇಶ ಮೊಬೈಲ್ಗೆ ಬಂದಿತ್ತು.
ಮಹಿಳೆ ಆಶ್ಚರ್ಯಗೊಂಡು ಪರಿಶೀಲಿಸಿದಾಗ 48,199 ಸಾವಿರ ರೂಪಾಯಿ ಹಣ ಕಡಿತವಾಗಿರುವುದು ದೃಢವಾಗಿತ್ತು. ವಂಚನೆಗೊಳಗಾಗಿರುವುದು ಗೊತ್ತಾಗಿ ತಕ್ಷಣವೇ ಬ್ಯಾಂಕ್ಗೆ ಮಾಹಿತಿ ನೀಡಿ ಕ್ರೆಡಿಟ್ ಕಾರ್ಡ್ ಅಕೌಂಟ್ ಬ್ಲಾಕ್ ಮಾಡಿಸಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪದೇ ಪದೆ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ: ವಾಹನ ನಾಶಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ