ಚಿಕ್ಕಮಗಳೂರು: ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್‍ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಆರೋಪದ ಮೇರೆಗೆ ಯುವಕನೊಬ್ಬನ ವಿರುದ್ಧ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 67 ಹಾಗೂ 67ಎ ಅಡಿ ಪ್ರಕರಣ ದಾಖಲಾಗಿದ್ದು ಆತನನ್ನು ಬಂಧಿಸಲಾಗಿದೆ. ಕಳಸ ತಾಲೂಕಿನ ಸಂಸೆ ಸಮೀಪದ ಬಸ್ರಿಕಲ್ ಗ್ರಾಮದ ಪ್ರಜ್ವಲ್(21) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತನು ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್, ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರಾಮ್ನಲ್ಲಿ ಯುವತಿಯರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡಿದ್ದನು. ಮಹಿಳೆಯರ ಖಾಸಗೀತನ ಹಾಗೂ ಗೌರವಕ್ಕೆ ಧಕ್ಕೆಯಾಗುವಂತಹ ಸಂದೇಶಗಳನ್ನೂ ಹಾಕಿರುವುದು ಕಂಡು ಬಂದಿತ್ತು.
ಅಲ್ಲದೇ ಆರೋಪಿ ಮಹಿಳೆಯರ ಖಾಸಗಿ ಫೋಟೋ ಹಾಗೂ ವಿಡಿಯೋ ಜೊತೆಗೆ ಇತ್ತೀಚೆಗೆ ರಾಜ್ಯ ಮತ್ತು ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಕೆಲ ಫೋಟೋಗಳನ್ನು ಸಹ ಬಳಸಿಕೊಂಡಿರುವುದಾಗಿ, ಜೊತೆಗೆ ಜಾಲತಾಣದಲ್ಲಿ ಮಹಿಳೆಯರ ಬಗ್ಗೆ ಅಪಪ್ರಚಾರ ಹಾಗೂ ಅಗೌರವ ತರುವಂತಹ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇರೆಗೆ ಆತನನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮಹಿಳೆಯರ ಖಾಸಗಿತನ ಹಾಗೂ ಗೌರವಕ್ಕೆ ತರುತ್ತಿದ್ದ ಆರೋಪದ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರ ಅಡಿ ಪ್ರಜ್ವಲ್ ವಿರುದ್ಧ ದೂರು ದಾಖಲಿಸಿಕೊಂಡಿರುವ ಕುದುರೆಮುಖ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ಹೆಚ್ಡಿಕೆಯಿಂದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಹುನ್ನಾರ: ಲಕ್ಷ್ಮಣ್ ಆರೋಪ - M Laxman