ರಾಯಚೂರು: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಳ್ಳದ ನೀರಿನಲ್ಲಿ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಮಂಗಳವಾರ ನಡೆದಿದೆ.
ರಾಯಚೂರು ತಾಲೂಕಿನ ಪತ್ತೆಪೂರ ಗ್ರಾಮದ ಸಮೀಪದ ಗೋಕುಲಸಾಬ ಹಳ್ಳದಲ್ಲಿ ರಾತ್ರಿ ವೇಳೆ ಘಟನೆ ನಡೆದಿದೆ. ಜಾಗೀರ ವೆಂಕಟಾಪುರ ಗ್ರಾಮದ ಬಸವರಾಜ್ (33) ನೀರು ಪಾಲಾಗಿದ್ದಾರೆ.
ನಗರದ ಖಾಸಗಿ ಬ್ಯಾಂಕ್ನಲ್ಲಿ ಬಸವರಾಜ್ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ವಾಪಸ್ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಬೈಕ್ ಅನ್ನು ಹಳ್ಳದ ದಡದಲ್ಲಿಟ್ಟು ಸೇತುವೆ ದಾಟುತ್ತಿದ್ದರು. ಈ ವೇಳೆ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಭಾರಿ ಮಳೆಯಿಂದಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಲ, ಗದ್ದೆಗಳಲ್ಲಿ ನೀರು ನಿಂತಿದ್ದು, ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಮದುವೆಗೆ ಒಂದು ದಿನ ಮುನ್ನ ಹೃದಯಾಘಾತದಿಂದ ಯುವಕ ಸಾವು! - Heart Attack