ಶಿವಮೊಗ್ಗ: ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ. ಇತರೆ ಎಲ್ಲಾ ಪ್ರಾಣಿಗಳಿಗೆ ಹೋಲಿಸಿದಲ್ಲಿ ಅತ್ಯಂತ ನಂಬಿಕಸ್ಥವಾಗಿರುತ್ತೆ. ತನ್ನ ಮಾಲೀಕರನ್ನು ಕಳ್ಳಕಾಕರಿಂದ ರಕ್ಷಣೆ ಮಾಡಲು ಸದಾ ಸಿದ್ಧವಾಗಿರುತ್ತೆ.
ಹೌದು, ಈ ಹಿಂದೆ ಕೇರಳದ ಕಣ್ಣೂರಿನಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮನೆ ಮಾಲೀಕ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ಅವರು ಸಾವನ್ನಪ್ಪಿ ನಾಲ್ಕು ತಿಂಗಳು ಕಳೆದರೂ ಸಹ ಆ ಆಸ್ಪತ್ರೆ ಎದುರು ತನ್ನ ಮಾಲೀಕನನ್ನು ಹುಡುಕಿಕೊಂಡು ಶ್ವಾನ ಪ್ರತಿದಿನ ಬಂದು ನಿಲ್ಲುತ್ತಿತ್ತು. ಇಂತಹದ್ದೇ ಮನಕಲಕುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕ ಸಾವನ್ನಪ್ಪಿದ್ದಾರೆ. ಇದನ್ನು ತಿಳಿಯದೆ ಸಾಕು ನಾಯಿವೊಂದು ಪ್ರತಿ ದಿನ ಆಸ್ಪತ್ರೆಗೆ ಬಂದು ತನ್ನ ಮಾಲೀಕನಿಗಾಗಿ ಹುಡುಕಾಟ ನಡೆಸುತ್ತಿದ್ದ ಈ ಕರುಣಾಜನಕ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರಲ್ಲಿ ನಡೆದಿದೆ.
ಘಟನೆ ಹಿನ್ನೆಲೆ; ಕಳೆದ 15 ದಿನದ ಹಿಂದೆ ಹೊಳೆಹೊನ್ನೂರು ಪಟ್ಟಣದ ಕನ್ನೆಕೊಪ್ಪದ ನಿವಾಸಿ ಪಾಲಾಕ್ಷಪ್ಪ(47) ಎದೆ ನೋವಿನಿಂದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ದಾಖಲಾಗಿದ್ದರು. ಆದರೆ ಇವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಕಾರಣಕ್ಕೆ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಾಲಾಕ್ಷಪ್ಪ ಸಾವನ್ನಪ್ಪಿದರು.
ಪಾಲಾಕ್ಷಪ್ಪ ಅವರು ಸಾಕಿದ ನಾಯಿ ಮಾತ್ರ ಪ್ರತಿ ದಿನ ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ತನ್ನ ಮಾಲೀಕ ಇದ್ದ ವಾರ್ಡ್ ಬಳಿ ಅವರಿಗಾಗಿ ಕಾಯುತ್ತಿತ್ತು. ಮೊದ ಮೊದಲು ಆಸ್ಪತ್ರೆಯ ಸಿಬ್ಬಂದಿ ಯಾವುದೋ ಬೀದಿ ನಾಯಿ ಬಂದು ಹೋಗುತ್ತಿದೆ ಎಂದು ತಿಳಿದು ಅದನ್ನು ಆಸ್ಪತ್ರೆಯಿಂದ ಓಡಿಸುತ್ತಿದ್ದರು. ಇಷ್ಟಾದರೂ ನಾಯಿ ಆಸ್ಪತ್ರೆಯ ಮುಂಭಾಗ ನಿಂತು ಆಸ್ಪತ್ರೆಗೆ ಬರುವ ರೋಗಿಗಳನ್ನು ಕಂಡು ಬೊಗಳುವ ಮೂಲಕ ಅದರ ಮೂಕರೋಧನೆ ವ್ಯಕ್ತಪಡಿಸುತ್ತಿತ್ತು. ಹೀಗೆ ಪ್ರತಿದಿನ ಆಸ್ಪತ್ರೆ ಒಳಗೆ ಬಂದು ಬೊಗಳುವುದನ್ನು ಕಂಡು ಸ್ಥಳೀಯರನ್ನು ವಿಚಾರಿಸಿದಾಗ ಅದರ ಹಿನ್ನೆಲೆ ಗೊತ್ತಾಗಿದೆ.
ಈ ಶ್ವಾನವು ಯಾರಿಗಾದರೂ ಕಚ್ಚಬಹುದೆಂಬ ಆತಂಕದಿಂದ ಆಸ್ಪತ್ರೆಯ ಸಿಬ್ಬಂದಿಗಳು ಪಟ್ಟಣ ಪಂಚಾಯತ್ ಸಿಬ್ಬಂದಿಗೆ ತಿಳಿಸಿದ್ದರು. ಸದ್ಯ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಈ ನಾಯಿಯನ್ನು ಹಿಡಿದು ತಮ್ಮ ಕಸ ವಿಲೇವಾರಿ ಘಟಕದ ಬಳಿ ಕಟ್ಟಿದ್ದರು. ಬಳಿಕ ಅದನ್ನು ಬೇರೆಕಡೆ ಬಿಟ್ಟು ಬಂದಿರುವ ಮಾಹಿತಿಯನ್ನು ಪಂಚಾಯತ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಒಂದಲ್ಲ, ಎರಡಲ್ಲ, 4 ತಿಂಗಳು; ಶವಾಗಾರದ ಮುಂದೆ ಮೃತ ಮಾಲೀಕನಿಗೋಸ್ಕರ ಎದುರು ನೋಡುತ್ತಿದೆ ಸಾಕು ನಾಯಿ!