ಮೈಸೂರು: ಸಾಲ ಪಡೆದವರು ಹಣವನ್ನು ಮರಳಿ ನೀಡದೇ ಇರುವ ಕಾರಣಕ್ಕೆ ಮನನೊಂದಿರುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಆಲನಹಳ್ಳಿಯಲ್ಲಿರುವ ಲಾಡ್ಜ್ವೊಂದರಲ್ಲಿ ನಡೆದಿದೆ.
ಸಾಲ ಪಡೆದವರು ವಾಪಸ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮನನೊಂದು ಲಾಡ್ಜ್ನಲ್ಲಿ ತಮ್ಮ ಮೂರು ವರ್ಷದ ಹೆಣ್ಣು ಮಗು ಮಲಗಿದ್ದ ವೇಳೆ, ಲಾಡ್ಜ್ನಲ್ಲಿ ವಿಡಿಯೋ ಮಾಡಿ ಸ್ನೇಹಿತರ ವಾಟ್ಸ್ಆ್ಯಪ್ ಗ್ರೂಪ್ಗೆ ಕಳುಹಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಶ್ವನಾಥ್ (30) ಹಾಗೂ ಅವರ ಹೆಂಡತಿ ಸುಶ್ಮಿತಾ(25) ಆತ್ಮಹತ್ಯೆ ಮಾಡಿಕೊಂಡವರು. ಮೈಸೂರಿನ ಹೊರವಲಯದ ಆಲನಹಳ್ಳಿಯ ರಿಂಗ್ ರಸ್ತೆಯಲ್ಲಿರುವ ಲಾಡ್ಜ್ನಲ್ಲಿ ಜನವರಿ 28 ರಂದು ರೂಮ್ ಪಡೆದಿದ್ದರು. ಅಂದು ಒಂದು ದಿನ ರೂಮ್ ನಲ್ಲೇ ಇದ್ದರು. ನಂತರ ವಿಶ್ವನಾಥ್ ತನ್ನ ಮೊಬೈಲ್ನಿಂದ ಎರಡು ವಾಟ್ಸ್ಆ್ಯಪ್ ಗ್ರೂಪ್ಗೆ 'ನನ್ನಿಂದ ಸಾಲ ಪಡೆದ ಮೂವರು ವ್ಯಕ್ತಿಗಳು ಹಣ ವಾಪಸ್ ನೀಡುತ್ತಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ವಿಡಿಯೋ ಮಾಡಿ, ವಾಟ್ಸ್ಆ್ಯಪ್ ಮೂಲಕ ಎರಡು ಗ್ರೂಪ್ಗಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಮಂಗಳವಾರ ಲಾಡ್ಜ್ನವರು ಸ್ಥಳೀಯ ಆಲನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ, ನಂತರ ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಮೃತನ ಸೋದರ ಶ್ಯಾಮ್ ಸುಂದರ್ ಆಲನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮೈಸೂರು: ಹಲ್ಲರೆ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆ, 90 ಮಂದಿ ವಿರುದ್ಧ ಎಫ್ಐಆರ್