ಬೆಂಗಳೂರು: ಪ್ರವಾಸಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದ ಬಾಲಕನೋರ್ವ ಬ್ಯಾಟರಿ ಚಾಲಿತ ವಾಹನಕ್ಕೆ ಅಡ್ಡ ಬಂದ ಪರಿಣಾಮ ಗಂಭೀರ ಗಾಯಗೊಂಡಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತ್ರಿಧರ್ (3) ಗಾಯಗೊಂಡಿರುವ ಬಾಲಕನಾಗಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಿಜಾಪುರ ಮೂಲದ ಕುಟುಂಬ ಜಿಗಣಿಗೆ ಬಂದಿದ್ದು, ಅಲ್ಲಿಂದ ನೆಂಟರಿಷ್ಟರೊಂದಿಗೆ ಬನ್ನೇರುಘಟ್ಟ ಮೃಗಾಲಯಕ್ಕೆ ಬಂದಿದ್ದರು. ಉದ್ಯಾನವನದ ರಸ್ತೆ ಬದಿಯಲ್ಲಿ ಬಾಲಕ ತ್ರಿಧರ್ ತನ್ನ ತಾಯಿ ಜತೆ ನಿಂತಿದ್ದ. ಎಂದಿನಂತೆ ಪ್ರವಾಸಿಗರನ್ನು ಕೂರಿಸಿಕೊಂಡು ಬ್ಯಾಟರಿ ಚಾಲಿತ ವಾಹನಗಳು ಸಂಚಾರ ಮಾಡುತ್ತಿದ್ದವು.
ಆಟವಾಡುತ್ತಿದ್ದ ತ್ರಿಧರ್ ಬ್ಯಾಟರಿ ಚಾಲಿತ ವಾಹನವು ಬರುತ್ತಿದ್ದ ಏಕಾಏಕಿ ರಸ್ತೆಗೆ ಓಡಿ ಬಂದಿದ್ದಾನೆ. ಪರಿಣಾಮ ನಿಧಾನವಾಗಿ ಚಾಲನೆಯಲ್ಲಿದ್ದ ವಾಹನಕ್ಕೆ ಆತನ ತಲೆ ಬಡಿದು ಚಕ್ರಕ್ಕೆ ಸಿಲುಕಿತ್ತು. ಕೂಡಲೇ ಎಚ್ಚೆತ್ತ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ತ್ರಿಧರ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸದ್ಯ ಖಾಸಗೀ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಬಾಲಕನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನವೇ ಭರಿಸುತ್ತಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹುಬ್ಬಳ್ಳಿ: ಯುವಕನ ಬರ್ಬರ ಹತ್ಯೆ, ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ