ಮಂಡ್ಯ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಒಂದು ಕಡೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಮತ್ತೊಂದು ಕಡೆ ಮಂಡ್ಯದ ಲೋಕ ಅಖಾಡ ಕೂಡ ರಂಗೇರುತ್ತಿದೆ. ಮಂಡ್ಯದ ಕ್ಷೇತ್ರದ ಟಿಕೆಟ್ ಈ ಬಾರಿ ಜೆಡಿಎಸ್ ಬದಲು, ಬಿಜೆಪಿಗೆ ನೀಡುವಂತೆ ಬಿಜೆಪಿ ಹೈಕಮಾಂಡ್ ಮೇಲೆ ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿನ್ನೆ ಕಾರ್ಯಕಾರಿಣಿ ಸಭೆ ಕೂಡ ನಡೆಸಿ ತೀರ್ಮಾನ ಕೂಡ ಮಾಡಿದ್ದಾರೆ.
ಮೂರರಿಂದ ಐದು ಕ್ಷೇತ್ರಗಳನ್ನ ಬಿಟ್ಟುಕೊಡುವಂತೆ ಬಿಜೆಪಿ ಮುಂದೆ ದಳಪತಿಗಳು ಬೇಡಿಕೆ ಇಟ್ಟಿದ್ದಾರೆ. ಅದರಲ್ಲೂ ಸಕ್ಕರಿನಗರಿ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನ ಜೆಡಿಎಸ್ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಸವಾಲು ವೊಡ್ಡಿರುವ ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರು ಹಾಗೂ ಪದಾಧಿಕಾರಿಗಳು ಮಂಡ್ಯ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ನಿನ್ನೆ ಪಾಂಡವಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸಿ ಸಾಕಷ್ಟು ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಮಾಜಿ ಶಾಸಕರಾದ ಪ್ರೀತಂಗೌಡ, ರಾಮ್ ದಾಸ್ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಹಾಸನ, ಮಂಡ್ಯದಲ್ಲೂ ಬಿಜೆಪಿಗೇ ಟಿಕೆಟ್ ನೀಡಬೇಕು ಎಂಬ ಅಪೇಕ್ಷೆ ಕಾರ್ಯಕರ್ತರಲ್ಲಿ ಇದೆ. ಬಿಜೆಪಿ 28ರಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತದೆ ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಹಾಸನ , ಮಂಡ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇತ್ತು ಎಂದು ಮಾಜಿ ಶಾಸಕ ಪ್ರೀತಂಗೌಡ ತಿಳಿಸಿದರು.
ಮಂಡ್ಯದಲ್ಲಿ ಜೆಡಿಎಸ್ ಗೆದ್ದಿರೋದು ಒಂದು ಕ್ಷೇತ್ರದಲ್ಲಿ ಅಷ್ಟೇ, ಬಿಜೆಪಿ ಸಹ ಪ್ರಬಲ ಪೈಪೋಟಿ ನೀಡಿದೆ. ಹೀಗಾಗಿ ಕಾರ್ಯಕರ್ತರು ಮಂಡ್ಯ ಸೀಟ್ ಕೇಳ್ತಾ ಇದ್ದಾರೆ. ಮಂಡ್ಯದಲ್ಲಿ ಬಿಜೆಪಿಯ ಹಲವು ನಾಯಕರು ಇದ್ದಾರೆ. ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸದ್ಯ ಸುಮಲತಾ ಅವರು ಮಂಡ್ಯದ ಹಾಲಿ ಸಂಸದರು. ಅವರ ಅಭಿಪ್ರಾಯವನ್ನು ಸಂಗ್ರಹಿಸಿ ರಾಜ್ಯ ನಾಯಕರಿಗೆ ಮಾಹಿತಿ ನೀಡುತ್ತೇನೆ ಎಂದು ಮಾಜಿ ಶಾಸಕ ಪ್ರೀತಂಗೌಡ ತಿಳಿಸಿದರು.
ಈ ನಡುವೆ ಸಂಸದೆ ಸುಮಲತಾ ಪರ ಮಾಜಿ ಸಚಿವ ನಾರಾಯಣ್ ಗೌಡ ಕೂಡ ಬ್ಯಾಟ್ ಬೀಸಿದ್ದಾರೆ. ಸುಮಲತಾ ಅವರು ನಮ್ಮ ವಿಧಾನಸಭಾ ಚುನಾವಣೆಯಲ್ಲಿ ಬಂದು ನಮಗೆ ಸಹಾಯ ಮಾಡಿದ್ರು. ಅವರಿಗೆ ಟಿಕೆಟ್ ನೀಡಿದ್ರೆ ತಪ್ಪೇನು ಎಂದು ಕೇಳಿದ್ದೇವೆ. ಬಿಜೆಪಿಯವರು ಮಂಡ್ಯ ಟಿಕೆಟ್‌ನ್ನು ಅವರಿಗೆ ಕೊಡಲಿ. ಹೈಕಮಾಂಡ್‌ಗೂ ಸಹ ಈ ಬಗ್ಗೆ ಹೇಳ್ತೀವಿ. ಸುಮಲತಾ ಅವರ ಮನೆಯಲ್ಲಿ ನಡೆದ ಸಭೆಗೆ ಹೋಗಿದ್ದೆ. ಆಗ ಅವರು ಮಂಡ್ಯದಲ್ಲಿಯೇ ಸ್ಪರ್ಧೆ ಮಾಡ್ತೀನಿ ಅಂದಿದ್ರು. ಮಂಡ್ಯದಲ್ಲಿ ಬಿಜೆಪಿಗೆ ಜೆಡಿಎಸ್ ಬಿಟ್ಟುಕೊಟ್ಟು, ಬೇರೆ ಕ್ಷೇತ್ರಗಳಿಗೆ ಅವರು ಹೋಗಲಿ ಎಂದಿದ್ದಾರೆ.
ಒಟ್ಟಾರೆ ಮೈತ್ರಿ ಟಿಕೆಟ್ ಘೋಷಣೆಗೂ ಮೊದಲೇ ಮಂಡ್ಯದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ನಮಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಹಾಕುತ್ತಿದ್ದಾರೆ. ಹಾಗಾದರೆ ಟಿಕೆಟ್ ಯಾರ ಪಾಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಓದಿ: ಹೈದರಾಬಾದ್‌ನಿಂದ ರಾಂಚಿಗೆ ಮರಳಿದ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರು: ವಿಶ್ವಾಸ ಮತ ಗೆಲ್ಲುವ ವಿಶ್ವಾಸ