ಬೆಂಗಳೂರು: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳಿದ್ದಾರೆ. ಅರ್ಥಾತ್ ಹೈವೆಯಲ್ಲಿ ಸಿಸಿಟಿವಿ ಕ್ಯಾಮರಾ ನೋಡುತ್ತಿದ್ದಂತೆ ನಿಧಾನವಾಗಿ ಹೋಗುವ ಸವಾರರು ಕ್ಯಾಮರಾ ಮರೆಯಾಗುತ್ತಿದ್ದಂತೆ ಆಕ್ಸಿಲೇಟರ್ ಒತ್ತಿ ಮಿತಿ ಮೀರಿ ಪ್ರಯಾಣಿಸಿದ್ದ 89 ಸಾವಿರ ವಿವಿಧ ವಾಹನ ಸವಾರರು ಸಿಕ್ಕಿಬಿದ್ದಿದ್ದಾರೆ.
ಆಗಸ್ಟ್ 1ರಿಂದ 26ರವರೆಗೆ ಬೆಂಗಳೂರು-ಮೈಸೂರು ಹೈವೆಯಲ್ಲಿ ಒಟ್ಟು 1.23 ಲಕ್ಷ ವಾಹನಗಳು ನಿಗದಿಕ್ಕಿಂತ ವೇಗವಾಗಿ ಸಂಚಾರ ನಡೆಸಿರುವುದು ಕಂಡು ಬಂದಿದೆ. ಈ ಪೈಕಿ ಹೈವೆಯಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಅಳವಡಿಸಲಾದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಕ್ಯಾಮರಾಗಳ ನೆರವಿನಿಂದ 89 ಸಾವಿರ ಸವಾರರು ನಿಯಮ ಉಲ್ಲಂಘಿಸಿರುವುದನ್ನ ಪತ್ತೆ ಹಚ್ಚಲಾಗಿದೆ.
ವೇಗದ ಮಿತಿ ದಾಟಿ ಸಂಚಾರ ನಡೆಸುವವರ ಪತ್ತೆ ಹಚ್ಚಲು ಬೆಂಗಳೂರು-ಮೈಸೂರು ಹೈವೆಯ 140 ಕೀ.ಮೀಟರ್ಗಳ ಪರಿಧಿಯ ಆಯಾ ಜಂಕ್ಷನ್ಗಳಲ್ಲಿ ಸ್ಪೀಡ್ ಡಿಟೆಕ್ಷನ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇಲ್ಲಿ 10 ಎಐ ಕ್ಯಾಮರಾ ಸೇರಿ ಒಟ್ಟು 40 ಎಎನ್ಪಿಆರ್ ಕ್ಯಾಮೆರಾ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೇಷನ್)ಗಳು ಹದ್ದಿನ ಕಣ್ಣಿಟ್ಟಿವೆ.
'ಸಿಸಿಟಿವಿ ಕ್ಯಾಮರಾ ಅಳವಡಿಸಿದ ಒಂದು ಜಂಕ್ಷನ್ನಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿ ಅಳವಡಿಸಿರುವ ಮತ್ತೊಂದು ಸಿಸಿಟಿವಿ ಕ್ಯಾಮರಾವಿರುವ ಸ್ಥಳಕ್ಕೆ ವಾಹನ ಸವಾರರು ಬಂದ ಪ್ರಯಾಣದ ಸಮಯ ಆಧರಿಸಿ ಎಐ ತಂತ್ರಜ್ಞಾನದಿಂದ ಹೋಲಿಕೆ ಮಾಡಿದಾಗ ಗರಿಷ್ಠ ವೇಗದ ಮಿತಿ ದಾಟಿ 89 ಸಾವಿರ ಮಂದಿ ಸವಾರರು ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಕಾರು, ಟ್ರಕ್ ಹಾಗೂ ಗೂಡ್ಸ್ ವಾಹನಗಳೇ ಹೆಚ್ಚು ನಿಯಮ ಉಲ್ಲಂಘಿಸಿರುವುದು ಗೊತ್ತಾಗಿದೆ' ಎಂದು ರಸ್ತೆ ಸುರಕ್ಷತೆ ಹಾಗೂ ಸಂಚಾರ ಇಲಾಖೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಹೈವೆಯಲ್ಲಿ ಸ್ಪೀಡ್ ಡಿಟೆಕ್ಷನ್ ಕ್ಯಾಮರಾವಿರುವ ಸ್ಥಳದಲ್ಲಿ ನಿಧಾನವಾಗಿ ಚಲಿಸಿ, ಬಳಿಕ ಮುಂದೆ ಸಾಗಿ ಓವರ್ ಸ್ಪೀಡಾಗಿ ಚಾಲನೆ ಮಾಡುತ್ತಿರುವ ಸವಾರರು ಹೆಚ್ಚಾಗಿ ಕಂಡುಬರುತ್ತಿದ್ದಾರೆ. ಇದರಿಂದ ಅಪಘಾತಗಳ ಸಂಖ್ಯೆ ಅಧಿಕವಾಗಿದೆ. ಕ್ಯಾಮರಾವಿಲ್ಲದಿರುವುದನ್ನ ಅರಿತು ಸ್ಪೀಡಾಗಿ ವಾಹನ ಚಾಲನೆ ಮಾಡಿದರೆ ಪೊಲೀಸರಿಗೆ ಸಿಕ್ಕಿಬೀಳುವುದಿಲ್ಲ ಎಂದು ಸವಾರರು ಭಾವಿಸಿದ್ದಾರೆ. ಹೈವೆನಲ್ಲಿ ಎಐ ಕ್ಯಾಮರಾಗಳ ಮೂಲಕ ವೇಗದ ಮಿತಿ ಬಗ್ಗೆ ಹದ್ದಿನ ಕಣ್ಣಿಡಲಾಗಿರುವ ಬಗ್ಗೆ ಅವರಿಗೆ ಅರಿವಿಲ್ಲ. ಹೀಗಾಗಿ ಸವಾರರು ಗರಿಷ್ಠ ವೇಗದ ಮಿತಿ ದಾಟಿ ಚಾಲನೆ ಮಾಡಿದರೆ ಮುಲಾಜಿಲ್ಲದೆ ಎಫ್ಐಆರ್ ದಾಖಲಿಸಲಾಗುವುದು. 130ಕ್ಕಿಂತ ಹೆಚ್ಚು ವಾಹನ ಚಾಲನೆ ಮಾಡಿದವರ ವಿರುದ್ಧ ಆಗಸ್ಟ್ 26ರ ಅಂತ್ಯಕ್ಕೆ 400 ಎಫ್ಐಆರ್ ದಾಖಲಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಚಾಲಕರೇ ಎಚ್ಚರ: ಇಂದಿನಿಂದ 130 ಕೀ.ಮೀ.ಗಿಂತ ವೇಗವಾಗಿ ಚಲಾಯಿಸಿದ್ರೆ ಎಫ್ಐಆರ್, ಲೈಸೆನ್ಸ್ ರದ್ದು - FIR Against Speed Driving