ಕಾರವಾರ(ಉತ್ತರ ಕನ್ನಡ): ಮೇ 7ರಂದು ನಡೆದ ಉತ್ತರಕನ್ನಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನದಲ್ಲಿ ಒಟ್ಟು 12,56,027 ಮಂದಿ ಮತದಾರರು ಮತ ಚಲಾಯಿಸಿದ್ದು, ಸರ್ವಾಧಿಕ ದಾಖಲೆಯ ಶೇ. 76.53 ರಷ್ಟು ಮತದಾನವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.74.16 ಮತದಾನವಾಗಿದ್ದು, ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಶೇ.2.14 ರಷ್ಟು ಅಧಿಕ ಮತದಾನವಾಗಿದೆ.
ಲೋಕಸಭಾ ಕ್ಷೇತ್ರದಲ್ಲಿ 8,23,604 ಪುರುಷರು, 8,17,536 ಮಹಿಳೆಯರು ಹಾಗೂ 12 ಮಂದಿ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 16,41,152 ಮತದಾರರು ಇದ್ದು ಮಂಗಳವಾರ ನಡೆದ ಮತದಾನದಲ್ಲಿ 6,33,630 ಪುರುಷ, 6,22,392 ಮಹಿಳೆಯರು ಹಾಗೂ 5 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 12,56,027 ಮತದಾರರು ತಮ್ಮ ಹಕ್ಕು ಚಲಾಯಿಸಿ ಶೇ.76.53 ರಷ್ಟು ಮತದಾನ ಮಾಡಿದ್ದಾರೆ.
ಇನ್ನು 2019 ರಲ್ಲಿ ಶೇ.74.16, 2014ರಲ್ಲಿ 69.04 ಮತದಾನವಾಗಿತ್ತು. ಆದರೆ ಈ ಬಾರಿ ಉತ್ತಮ ಪ್ರಮಾಣದಲ್ಲಿ ಮತದಾನವಾಗಿದೆ. ವಿಧಾನಸಭಾ ಕ್ಷೇತ್ರವಾರು ಪರಿಶೀಲಿಸಿದಲ್ಲಿ ಖಾನಾಪುರ ಕ್ಷೇತ್ರದಲ್ಲಿ 83,478 ಪುರುಷ ಮತ್ತು 78,586 ಮಹಿಳೆಯರು, 1 ತೃತೀಯ ಲಿಂಗಿ ಸೇರಿದಂತೆ ಒಟ್ಟು 1,62,065 ಮತದಾರರು ಮತ ಚಲಾಯಿಸಿದ್ದು, ಶೇ.73.85 ರಷ್ಟು ಮತದಾನವಾಗಿದೆ.
ಕಿತ್ತೂರು ಕ್ಷೇತ್ರದಲ್ಲಿ, 78,136 ಪುರುಷ ಮತ್ತು 74,634 ಮಹಿಳೆಯರು, 2 ತೃತೀಯ ಲಿಂಗಿ ಸೇರಿದಂತೆ ಒಟ್ಟು 1,52,772 ಮತದಾರರು ಮತ ಚಲಾಯಿಸಿದ್ದು, ಶೇ. 76.27 ರಷ್ಟು ಮತದಾನವಾಗಿದೆ. ಹಳಿಯಾಳ ಕ್ಷೇತ್ರದಲ್ಲಿ, 71,131 ಪುರುಷ ಮತ್ತು 69,839 ಮಹಿಳೆಯರು, 1 ತೃತೀಯ ಲಿಂಗಿ ಸೇರಿದಂತೆ ಒಟ್ಟು1,40,971 ಮತದಾರರು ಮತ ಚಲಾಯಿಸಿದ್ದು, ಶೇ. 75.91 ರಷ್ಟು ಮತದಾನವಾಗಿದೆ.
ಕಾರವಾರ ಕ್ಷೇತ್ರದಲ್ಲಿ 81,917 ಪುರುಷ ಮತ್ತು 83,682 ಮಹಿಳೆಯರು ಸೇರಿದಂತೆ ಒಟ್ಟು1,65,599 ಮತದಾರರು ಮತ ಚಲಾಯಿಸಿದ್ದು, ಶೇ.73.63 ರಷ್ಟು ಮತದಾನವಾಗಿದೆ. ಕುಮಟಾ ಕ್ಷೇತ್ರದಲ್ಲಿ 73,479 ಪುರುಷ ಮತ್ತು 73,827 ಮಹಿಳೆಯರು, 1 ತೃತೀಯ ಲಿಂಗಿ ಸೇರಿದಂತೆ ಒಟ್ಟು 1,47,307 ಮತದಾರರು ಮತ ಚಲಾಯಿಸಿದ್ದು, ಶೇ.76.93 ರಷ್ಟು ಮತದಾನವಾಗಿದೆ.
ಭಟ್ಕಳ ಕ್ಷೇತ್ರದಲ್ಲಿ 85,124 ಪುರುಷ ಮತ್ತು 87,947 ಮಹಿಳೆಯರು, ಸೇರಿದಂತೆ ಒಟ್ಟು 1,73,071 ಮತದಾರರು ಮತ ಚಲಾಯಿಸಿದ್ದು, ಶೇ.76 ರಷ್ಟು ಮತದಾನವಾಗಿದೆ. ಶಿರಸಿ ಕ್ಷೇತ್ರದಲ್ಲಿ, 83,781 ಪುರುಷ ಮತ್ತು 81,124 ಮಹಿಳೆಯರು, ಸೇರಿದಂತೆ ಒಟ್ಟು 1,64,905 ಮತದಾರರು ಮತ ಚಲಾಯಿಸಿದ್ದು, ಶೇ.80.48 ರಷ್ಟು ಮತದಾನವಾಗಿದೆ. ಯಲ್ಲಾಪುರ ಕ್ಷೇತ್ರದಲ್ಲಿ, 76,584 ಪುರುಷ ಮತ್ತು 72,753 ಮಹಿಳೆಯರು ಸೇರಿದಂತೆ ಒಟ್ಟು 1,49,337 ಮತದಾರರು ಮತ ಚಲಾಯಿಸಿದ್ದು, ಶೇ.79.96 ರಷ್ಟು ಮತದಾನವಾಗಿದೆ.
ಯೋಧರಿಂದ ಡಿಮಸ್ಟರಿಂಗ್ ಕೇಂದ್ರಕ್ಕೆ ಭದ್ರತೆ: ಲೋಕಸಭಾ ವ್ಯಾಪ್ತಿಯ ಎಲ್ಲಾ ವಿಧಾನಸಭಾ ವ್ಯಾಪ್ತಿಯ ಡಿಮಸ್ಟರಿಂಗ್ ಕೇಂದ್ರಗಳಲ್ಲಿ ಸಂಗ್ರಹಿಸಿದ ಮತಯಂತ್ರಗಳು ಮತ್ತು ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಕೊಂಡೊಯ್ದು ಕುಮಟಾದ ಎ.ವಿ. ಬಾಳಿಗಾ ಕಾಲೇಜಿನ ಭದ್ರತಾ ಕೊಠಡಿಯಲ್ಲಿಟ್ಟು ಸೀಲ್ ಮಾಡಲಾಗಿದೆ. ಈ ಭದ್ರತಾ ಕೊಠಡಿಗಳಿಗೆ 24/7 ಅವಧಿಯ ಕರ್ತವ್ಯ ನಿರ್ವಹಣೆಗಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರ ಮೂಲಕ ಬಿಗಿ ಭದ್ರತೆ ಒದಗಿಸಲಾಗಿದೆ.
ಸ್ವೀಪ್ ಚಟುವಟಿಕೆಗಳಿಂದ ಮತದಾನ ಹೆಚ್ಚಳ-ಜಿಲ್ಲಾಧಿಕಾರಿ: "ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೈಗೊಂಡ ವೈವಿಧ್ಯಮಯವಾದ ವ್ಯಾಪಕ ಮತದಾನ ಜಾಗೃತಿ ಕಾರ್ಯಕ್ರಮಗಳು, ಕಳೆದ ಬಾರಿ ಕಡಿಮೆ ಮತದಾನವಾಗಿದ್ದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮತಗಟ್ಟೆಯಲ್ಲಿ ಮತದಾರರಿಗೆ ಮತದಾನ ಮಾಡಲು ಯಾವುದೇ ತೊಂದರೆಯಾಗದಂತೆ ಸೂಕ್ತ ನೆರಳು ಮತ್ತು ನೀರಿನ ಸೌಲಭ್ಯ ಒದಗಿಸಿರುವುದು ಹಾಗೂ ಹೆಚ್ಚಿನ ಸಂಖ್ಯೆಯ ಯುವ ಮತದಾರರು ಸೇರಿದಂತೆ ಎಲ್ಲಾ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿರುವ ಕಾರಣ ಮತದಾನ ಪ್ರಮಾಣವು ಕಳೆದ ಬಾರಿಗಳಿಗಿಂತಲೂ ದಾಖಲೆಯ ಪ್ರಮಾಣದಲ್ಲಿ ಅತ್ಯಧಿಕವಾಗಿದೆ".
"ಈ ಸರ್ವಾಧಿಕ ದಾಖಲೆಗಾಗಿ ಸಹಕರಿಸಿದ ಜಿಲ್ಲೆಯ ಎಲ್ಲಾ ಮತದಾರರು, ಸಾರ್ವಜನಿಕರು, ರಾಜಕೀಯ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು, ಚುನಾವಣಾ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಧಾರವಾಡ ಲೋಕಸಭೆಗೆ ಶಾಂತಯುತ ಮತದಾನ: ಮತಪೆಟ್ಟಿಗೆ ಸೇರಿದ 18 ಅಭ್ಯರ್ಥಿಗಳ ಭವಿಷ್ಯ - Dharwad Turnout