ಬೆಂಗಳೂರು : ಇಲ್ಲಿನ ಕೆ. ಪಿ ಅಗ್ರಹಾರ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿಂದು ಕೇಕ್ ತಿಂದು 5 ವರ್ಷದ ಮಗು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮಗುವಿನ ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮಿ ಕೂಡಾ ಅಸ್ವಸ್ಥಗೊಂಡಿದ್ದು, ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫುಡ್ ಡಿಲಿವರಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿರುವ ಬಾಲರಾಜ್, ಮೂರು ದಿನಗಳ ಹಿಂದೆ ಗ್ರಾಹಕರೊಬ್ಬರು ಆರ್ಡರ್ ಮಾಡಿ ಕ್ಯಾನ್ಸಲ್ ಮಾಡಿದ್ದ ಕೇಕ್ ಅನ್ನು ಮನೆಗೆ ತಂದು ಫ್ರಿಡ್ಜ್‌ನಲ್ಲಿಟ್ಟಿದ್ದರು. ಭಾನುವಾರ ಊಟವಾದ ಬಳಿಕ ಕೇಕ್ ತಿಂದಿದ್ದಾರೆ. ಬಳಿಕ ಇದ್ದಕ್ಕಿದ್ದಂತೆ ಮೂವರೂ ಅಸ್ವಸ್ಥಗೊಂಡಿದ್ದು, ಅಕ್ಕಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೇಕ್ ತಿಂದಿದ್ದರಿಂದಲೇ ಅಸ್ವಸ್ಥರಾಗಿದ್ದಾರಾ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದಾರಾ? ಎಂಬುದರ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಬೇಕಿದೆ. ಕೆ.ಪಿ.ಅಗ್ರಹಾರ ಠಾಣಾ ಪೊಲೀಸರು ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಪುಡ್ ಪಾಯ್ಸನ್ ಆಗಿರುವುದು ಬಹುತೇಕ ಖಚಿತ: ಈ ಕುರಿತು ಮಾಹಿತಿ ನೀಡಿರುವ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಆಂಜಿನಪ್ಪ, ''ದಂಪತಿ ಹಾಗೂ ಮಗುವನ್ನು ಇಂದು ಬೆಳಗಿನ ಜಾವ ಆಸ್ಪತ್ರೆಗೆ ಕರೆತರಲಾಗಿತ್ತು. ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮಿ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ಬರುವ ಮುನ್ನವೇ ಮಗು ಧೀರಜ್ ಸಾವನ್ನಪ್ಪಿದ್ದಾನೆ. ದಂಪತಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೊರಗಡೆ ಎಲ್ಲಿಯೋ ಊಟ ಮಾಡಿದ್ದಾರೆ. ನಂತರ ಮನೆಗೆ ಬಂದು ಕೇಕ್ ತಿಂದಿದ್ದಾರೆ ಎನ್ನಲಾಗುತ್ತಿದೆ. ಮೂವರಿಗೂ ಪುಡ್ ಪಾಯ್ಸನ್ ಆಗಿರುವುದು ಬಹುತೇಕ ಖಚಿತವಾಗಿದೆ. ಆದರೆ, ಕೇಕ್‌ನಿಂದನಾ ಅಥವಾ ಊಟದಿಂದನಾ ಎಂಬುದು ಬಾಲಕನ ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿಯಬೇಕಿದೆ. ದಂಪತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಚಿಕಿತ್ಸೆ ಮುಂದುವರೆಸಿದ್ದೇವೆ'' ಎಂದು ತಿಳಿಸಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: "ಮಾಸ್ಟರ್ ಧೀರಜ್ ಎಂಬ ಐದು ವರ್ಷದ ಬಾಲಕ ಫುಡ್ ಪಾಯಿಸನ್ನಿಂದ ಮೃತಪಟ್ಟಿರುವುದಾಗಿ ಕೆಂಪೇಗೌಡ ಆಸ್ಪತ್ರೆಯಿಂದ ನಮಗೆ ಬಂದಿರುವ MLC(Medico Legal Case)ಯಿಂದ ತಿಳಿದು ಬಂದಿದೆ. ಮೃತ ಬಾಲಕನ ತಂದೆ ಬಾಲರಾಜು Swiggy ಡೆಲಿವರಿ ಕೆಲಸ ಮಾಡುತ್ತಿದ್ದರು. ತಾಯಿ ನಾಗಲಕ್ಷ್ಮಿ ಗೃಹಿಣಿ. ಇವರಿಬ್ಬರೂ ಕೂಡ ಫುಡ್ ಪಾಯ್ಸನ್‌ನಿಂದಾಗಿ ಐಸಿಯುನಲ್ಲಿದ್ದಾರೆ. ತಂದೆ-ತಾಯಿ ಹೇಳಿಕೆ ನೀಡುವ ಸ್ಥಿತಿಗೆ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಹೇಳಿದ್ದಾರೆ.
ಇದನ್ನೂ ಓದಿ: ರಾಮನಗರ: ಜ್ಯೂಸ್ ಎಂದು ತಿಳಿದು ಕೀಟನಾಶಕ ಸೇವಿಸಿ ಎರಡು ವರ್ಷದ ಮಗು ಸಾವು.. ಪೋಷಕರ ಆಕ್ರಂದನ