ಬೆಂಗಳೂರು : ಯುಪಿಐ ಸ್ಕ್ಯಾನರ್ ಬಳಸುವ ಅಂಗಡಿ ಹಾಗೂ ಹೋಟೆಲ್ ಮಾಲೀಕರೇ ಎಚ್ಚರ. ನಿಮ್ಮ ಯುಪಿಐ ಸ್ಕ್ಯಾನರ್ ಅಪ್ ಡೇಟ್ ಮಾಡಬೇಕು ಎಂದು ಹೇಳಿ ನಿಮ್ಮ ಮೊಬೈಲ್ ಪಡೆದು ಕ್ಷಣಾರ್ಧದಲ್ಲೇ ನಿಮ್ಮ ಅಕೌಂಟ್ ನಲ್ಲಿರುವ ಹಣ ದೋಚುತ್ತಾರೆ. ಅಂತಹುದೇ ಒಂದು ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದ್ದು, ಹೋಟೆಲ್ ಮಾಲೀಕರಿಗೆ ಯುಪಿಐ ಸ್ಕ್ಯಾನರ್ ಅಪ್ ಡೇಟ್ ಮಾಡುವ ಸೋಗಿನಲ್ಲಿ ಅಪರಿಚಿತ ಯುವಕ 48 ಸಾವಿರ ರೂಪಾಯಿ ವಂಚಿಸಿದ್ದಾನೆ.
ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣನಗರದಲ್ಲಿರುವ ಮಂಜುನಾಥ್ ಟಿಫನ್ ಸೆಂಟರ್ ಮಾಲೀಕ ಭಾಸ್ಕರ್ ಎಂಬುವರು ವಂಚನೆಗೊಳಗಾಗಿದ್ದು, ಈ ಸಂಬಂಧ ದೂರು ನೀಡಿದ ಮೇರೆಗೆ ಅಪರಿಚಿತನ ವಿರುದ್ಧ ಎಫ್ಐಅರ್ ದಾಖಲಾಗಿದೆ. ಇದೇ ತಿಂಗಳು 4 ರಂದು ಹೋಟೆಲ್ ಬಳಿ ಬಂದ ಅಪರಿಚಿತ ಯುವಕ ನಿಮ್ಮ ಯುಪಿಐ ಸ್ಕ್ಯಾನರ್ ಅಪ್ ಡೇಟ್ ಮಾಡಬೇಕಿದೆ ಎಂದು ಹೇಳಿ ಮೊಬೈಲ್ ಪಡೆದಿದ್ದಾನೆ. ಯುಪಿಎ ಮೂಲಕ 1 ರೂಪಾಯಿ ಪಾವತಿಸಿಕೊಂಡ ಬಳಿಕ ಸ್ಕ್ಯಾನರ್ ಅಪಡೇಟ್ ಆಗಿದೆ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದ.
ಕೆಲ ಕ್ಷಣಗಳ ಬಳಿಕ ಪ್ರತ್ಯೇಕ ಎರಡು ಬ್ಯಾಂಕ್ ಅಕೌಂಟ್ ಗಳಿಂದ ಒಟ್ಟು 48 ಸಾವಿರ ರೂಪಾಯಿ ಹಣ ಕಡಿತಗೊಂಡಿರುವ ಬಗ್ಗೆ ಮೊಬೈಲ್ ನಲ್ಲಿ ಸಂದೇಶ ಬಂದಿರುವುದು ನೋಡಿ ತಾನು ವಂಚನೆಗೊಳಗಾಗಿರುವುದು ಕಂಡುಕೊಂಡಿದ್ದಾರೆ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಸಿಎಸ್ಆರ್ ಫಂಡ್ ಸೋಗಿನಲ್ಲಿ ವಂಚನೆ, ಐವರು ಸೆರೆ: ₹30 ಕೋಟಿ ಖೋಟಾ ನೋಟು ವಶಕ್ಕೆ - Fraudsters Arrested