ರಾಯಚೂರು: ನಗರದ ಚಂದ್ರಬಂಡಾ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿದ 46 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಬೆಳಗ್ಗೆ ಉಪಾಹಾರದಲ್ಲಿ ಪಲಾವ್ ತಿಂದಿದ್ದು, ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಮಕ್ಕಳನ್ನು ಕೂಡಲೇ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 46 ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ವಾಂತಿ ಆಗಿದ್ದರಿಂದ, ಇಬ್ಬರಿಗೆ ಹೆಚ್ಚು ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಮಕ್ಕಳು ಗುಣಮುಖವಾಗಿದ್ದು, ವಾಪಸ್ ವಸತಿ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ನಿತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ, ಡಿಹೆಚ್‌ಒ ಹಾಗೂ ಇತರ ಅಧಿಕಾರಿಗಳು ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿ, ವೈದ್ಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ನಿತೀಶ್, "46 ವಿದ್ಯಾರ್ಥಿಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿರುವ ಕಾರಣಕ್ಕೆ ಅವರಿಗೆ ವೈದ್ಯರು ಹೆಚ್ಚು ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನುಳಿದ ಮಕ್ಕಳು ಆರಾಮಾಗಿದ್ದಾರೆ. ಮಳೆಗಾಲದ ಹಿನ್ನೆಲೆ ಗ್ಯಾಸ್ಟ್ರೋಎಂಟರಾಲಜಿ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಆದ್ದರಿಂದ ಈ ತರಹ ಆಗುತ್ತಿದೆ. ಇದರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: ಕುಡಿಯುವ ನೀರಲ್ಲಿ ಚರಂಡಿ, ಮಳೆ ನೀರು ಮಿಶ್ರಣ?: 35 ಮಂದಿ ಅಸ್ವಸ್ಥ, ಮೂವರು ಸಾವು - contaminated water issue