ಬೆಂಗಳೂರು: ಕೆಂಪೇಗೌಡ ಅಂತರಾಷ್ಚ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ನಡೆಸಿ ಪುಂಟಾಟ ಮೆರೆದಿದ್ದ 44 ಯುವಕರನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಕ್ ವ್ಹೀಲಿಂಗ್ ಸಂಬಂಧ 33 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಯಲಹಂಕದ ಚಿಕ್ಕಜಾಲ ಬಳಿಯ ಏರ್ಪೋರ್ಟ್ ರಸ್ತೆಯಲ್ಲಿ ಗುರುವಾರ ಸಂಜೆ 5 ಗಂಟೆ ಸಮಯದಲ್ಲಿ ಪುಂಡರ ಗ್ಯಾಂಗ್ವೊಂದು ಬೈಕ್ ವ್ಹೀಲಿಂಗ್ ಮಾಡುತ್ತಿತ್ತು. ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಬರುತ್ತಿದ್ದ ಸಾರ್ವಜನಿಕರು ಬೈಕ್ ವ್ಹೀಲಿಂಗ್ ಹುಚ್ಚಾಟವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಈ ವೇಳೆ ಪುಂಡನೊಬ್ಬ ತನ್ನ ಮಧ್ಯದ ಬೆರಳನ್ನು ತೋರಿಸುವ ಮೂಲಕ ಕಾರಿನಲ್ಲಿದ್ದವರಿಗೆ ಬೆದರಿಕೆ ಹಾಕಿದ್ದ. ಈ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
''ಬೈಕ್ ವ್ಹೀಲಿಂಗ್ ಹುಚ್ಚಾಟ ನಡೆಸುವ ಮೂಲಕ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ, ಅಮಾಯಕರ ಪ್ರಾಣಕ್ಕೆ ಆಪತ್ತು ಮಾಡುತ್ತಿದ್ದಾರೆ. ಇಂತಹ ಯುವಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು'' ಎಂದು ಮನವಿ ಮಾಡಿದ್ದರು. ದೃಶ್ಯದ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಏರ್ಪೋರ್ಟ್ ರಸ್ತೆಯಲ್ಲಿ ವ್ಹೀಲಿಂಗ್ ನಡೆಸಿದ 44 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಯಲಹಂಕ ವಿಭಾಗದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ವಿರುದ್ಧ 33 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ 9, ಯಲಹಂಕ ಠಾಣೆಯಲ್ಲಿ 6 ಮತ್ತು ಹೆಬ್ಬಾಳ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿವೆ. ಬೈಕ್ ವ್ಹೀಲಿಂಗ್ ಪುಂಡರಿಗೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಯುವಕರೇ ಟಾರ್ಗೆಟ್! ಪರಿಚಯಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧನ - Honey Trap Gang