ಬೆಂಗಳೂರು: ರಾಜ್ಯಾದ್ಯಂತ ಜು.13 ರಂದು ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವಿವಾದ ಪೂರ್ವ ಪ್ರಕರಣಗಳು ಸೇರಿ ಒಟ್ಟು 40 ಲಕ್ಷ ಪ್ರಕರಣಗಳ ಇತ್ಯರ್ಥ ಪಡಿಸುವ ಮೂಲಕ ಇತಿಹಾಸ ದಾಖಲಾಗಿದೆ.
ಈ ಕುರಿತಂತೆ ಹೈಕೋರ್ಟ್ನ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್, ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯ ಹೈಕೋರ್ಟ್ ಪೀಠಗಳಲ್ಲಿ 17 ಅದಾಲತ್ ಪೀಠಗಳು ಕಾರ್ಯನಿರ್ವಹಿಸಿದ್ದು, ಒಟ್ಟು 1,655 ಅರ್ಜಿಗಳನ್ನು ಇತ್ಯರ್ಥ ಗೊಳಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 1,016 ಪೀಠಗಳು ಕಾರ್ಯನಿರ್ವಹಿಸಿ 40,01,786 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, ಒಟ್ಟು 2,640 ಕೋಟಿ ರೂ.ಗಳ ಪರಿಹಾರವನ್ನು ಕೊಡಿಸಿರುವುದಾಗಿ ವಿವರಿಸಿದರು.
ಅಲ್ಲದೆ, ವೈವಾಹಿಕ ವಿವಾದಗಳಿಗೆ ಸಂಬಂಧಿಸಿದಂತೆ ಒಟ್ಟು 1,550 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅದರಲ್ಲಿ 259 ದಂಪತಿಗಳು ಮತ್ತೆ ಒಂದುಗೂಡಿವೆ. 3,356 ವಿಭಾಗದ ದಾವೆಗಳನ್ನು ಇದೇ ಸಂದರ್ಭದಲ್ಲಿ ಇತ್ಯರ್ಥ ಪಡಿಸಲಾಗಿದೆ. 11,155 ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. 261 ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 101 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. 897 ಮೋಟಾರು ವಾಹನ ವಿವಾದಗಳನ್ನು ಇತ್ಯರ್ಥ ಪಡಿಸಿದ್ದು, 61 ಕೋಟಿ ರೂ. ಪರಿಹಾರ ನೀಡಲಾಗಿದೆ. 15 ರೇರಾ ಪ್ರಕರಣಗಳ ಇತ್ಯರ್ಥ ಪಡಿಸಿ 1.22 ಕೋಟಿ ರೂ.ಪರಿಹಾರ ನೀಡಲಾಗಿದೆ. 69 ಗ್ರಾಹಕ ವ್ಯಾಜ್ಯಗಳ ಇತ್ಯರ್ಥ ಪಡಿಸಿದ್ದು, 3.92 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಅಲ್ಲದೆ, 3,769 ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿ 118 ಕೋಟಿ ರೂ.ಗಳ ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.
694 ಕೋಟಿ ರೂ. ತೆರಿಗೆ ಪಾವತಿ: ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿ ಸೌಲಭ್ಯವನ್ನು ಲೋಕ ಅದಾಲತ್ಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಇದಕ್ಕೆ ಸರ್ಕಾರ ಸ್ಪಂದಿಸಿತ್ತು. ಪರಿಣಾಮ 9 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರು ಈ ಸೌಲಭ್ಯ ಪಡೆದುಕೊಂಡಿದ್ದು, 694 ಕೋಟಿ ರೂ.ಗಳ ತೆರಿಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
ಅದಾಲತ್ನ ಇತರೆ ಪ್ರಮುಖ ಅಂಶಗಳು: ಬೆಂಗಳೂರಿನ ಮೋಟಾರು ವಾಹನ ವಿವಾದ ಪ್ರಕರಣವೊಂದರಲ್ಲಿ 4.5 ಕೋಟಿ ರೂ.ಪರಿಹಾರ, ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ 10 ಕೋಟಿ ರೂ. ಪ್ರಕರಣ ಇತ್ಯರ್ಥ, 31 ವರ್ಷಗಳ ಹಳೆಯ ಶಾಶ್ವತ ಪ್ರತಿಬಂಧಕಾಜ್ಞೆ ಪ್ರಕರಣದ ಇತ್ಯರ್ಥ, ಗದಗದಲ್ಲಿ 1 ಕೋಟಿ ರೂ.ಗಳ ತೆರಿಗೆ ಪ್ರಕರಣ ಇತ್ಯರ್ಥ, ಕೋಲಾರದಲ್ಲಿ ಸ್ಪೆಸಿಪಿಕ್ ಫರ್ಪಾರ್ಮೆನ್ಸ್ ಪ್ರಕರಣದಲ್ಲಿ 1.80 ಕೋಟಿ ರೂ.ಗಳ ಪ್ರಕರಣ ಇತ್ಯರ್ಥ, ಚಿತ್ರದುರ್ಗದಲ್ಲಿ 40 ವರ್ಷಗಳ ಹಳೆಯ ಶಾಶ್ವತ ಪ್ರತಿಬಂಧಕಾಜ್ಞೆ ಪ್ರಕರಣ ಇತ್ಯರ್ಥ ಪಡಿಸಲಾಗಿದೆ.
ಚಾಮರಾಜನಗರದಲ್ಲಿ 28 ವರ್ಷಗಳ ಹಳೆಯ ಪಾಲು ವಿಭಾಗ ಪ್ರಕರಣ, ದಾವಣಗೆರೆಯಲ್ಲಿ 25 ವರ್ಷಗಳ ಹಳೆಯ ಪಾಲು ವಿಭಾಗ ಪ್ರಕರಣ. ಬಳ್ಳಾರಿಯಲ್ಲಿ 43 ಲಕ್ಷ ರೂ.ಗಳ ಅಮಲ್ಜಾರಿ ಪ್ರಕರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳನ್ನು ಇತ್ಯರ್ಥ ಪಡಿಸಿರುವುದಾಗಿ ಅವರು ವಿವರಿಸಿದರು. ಹೈಕೋರ್ಟ್ನ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತಿತರರಿದ್ದರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಲೋಕ ಅದಾಲತ್: ಮತ್ತೆ ಒಂದಾದ 16 ಜೋಡಿಗಳು, ಕೌಟುಂಬಿಕ ನ್ಯಾಯಾಲಯದಲ್ಲಿ ಸಂಭ್ರಮ - COUPLE REUNITE AT LOK ADALAT