ಗದಗ: ರೀಲ್ಸ್ ಸ್ಪಾಟ್ ಮಾಡಿಕೊಂಡಿದ್ದ ಜಿಲ್ಲಾಸ್ಪತ್ರೆ ವೈದ್ಯಕೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಗದಗನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ರೀಲ್ಸ್ ಮಾಡಿ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದ ವಿದ್ಯಾರ್ಥಿಗಳಿಗೆ ಜಿಮ್ಸ್ ನಿರ್ದೇಶಕರು ಅಮಾನತು ಶಿಕ್ಷೆ ನೀಡಿದ್ದಾರೆ.
ಏನಿದು ಪ್ರಕರಣ?: ಜಿಮ್ಸ್ ಆಸ್ಪತ್ರೆ ಕಾರಿಡಾರ್ನಲ್ಲಿ ಹಿಂದಿ ಮತ್ತು ಕನ್ನಡ ಚಿತ್ರಗಳ ಹಾಡಿಗೆ ಸ್ಟೂಡೆಂಟ್ಸ್ ರೀಲ್ಸ್ ಮಾಡಿದ್ದರು. ಈ ರೀಲ್ಸ್ ಅನ್ನು ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಬಳಿಕ ಇದು ಸಾಕಷ್ಟು ವೈರಲ್ ಆಗಿತ್ತು. ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆ ಸೇರಿರೋ ಬಡರೋಗಿಗಳ ಸಂಕಟ ಒಂದೆಡೆಯಾದ್ರೆ, ಇತ್ತ ವೈದ್ಯಕೀಯ ವಿದ್ಯಾರ್ಥಿಗಳ ಮಸ್ತ್ ಮಜಾ ರೀಲ್ಸ್ ಮತ್ತೊಂದೆಡೆ ಆಗಿದೆ. ರೀಲ್ಸ್ ಮಾಡೋಕೆ ಬೇರೆ ಜಾಗ ಸಿಗಲಿಲ್ವಾ ಅಂತ ನೆಟ್ಟಿಗರು ತಮ್ಮ ಆಕ್ರೋಶ ಹೊರ ಹಾಕಿದ್ದರು.
ಇನ್ನು ಈ ಘಟನೆ ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಅವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೀಲ್ಸ್ ಮಾಡಿದ್ದ ಒಟ್ಟು 38 ವಿದ್ಯಾರ್ಥಿಗಳಿಗೆ ಹತ್ತು ದಿನಗಳ ಕಾಲ ಅಮಾನತು ಶಿಕ್ಷೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಈ ರೀತಿ ಮಾಡಿರೋದು ದೊಡ್ಡ ಅಪರಾಧ, ರೋಗಿಗಳಿಗೆ ಅನಾನುಕೂಲ ಆಗುವ ರೀತಿ ಪಬ್ಲಿಕ್ ಪ್ಲೇಸ್ನಲ್ಲಿ ಮಾಡಿರೋದು ಖಂಡಿತಾ ತಪ್ಪು. ರೀಲ್ಸ್ ಮಾಡಿರುವ ಎಲ್ಲರೂ MBBS ಪೂರ್ಣಗೊಳಿಸಿ ಹೌಸ್ ಮೆನ್‌ಶಿಪ್‌ನಲ್ಲಿದ್ದಾರೆ. ಅವರಿಗೆ ಸಿಗಬೇಕಾಗಿದ್ದ ಪೋಸ್ಟಿಂಗ್ ಹತ್ತು ದಿನಗಳ ಕಾಲ ತಡವಾಗಿ ಸಿಗುತ್ತೆ. ಈ ರೀತಿ ವಿಡಿಯೋ ಮಾಡೋದಕ್ಕೆ ನಾವ್ಯಾರೂ ಅನುಮತಿ ಕೊಟ್ಟಿಲ್ಲ. ಇನ್ಮುಂದೆ ಯಾರೇ ಇರಲಿ ಆಸ್ಪತ್ರೆಯಲ್ಲಿ ಈ ರೀತಿ ಮಾಡಿದವರ ಮೇಲೆ ಇದೇ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ.
ಈ ವಿಷಯ ಗಮನಕ್ಕೆ ಬಂದ ತಕ್ಷಣವೇ ಆ 38 ವಿದ್ಯಾರ್ಥಿಗಳನ್ನು ಕರೆಸಿ ಮಾಹಿತಿ ಕೇಳಿದ್ದೇವೆ. ಅವರು ಇನ್ನು ಕೆಲವು ದಿನಗಳಲ್ಲಿ ಪೊಸ್ಟ್ ಗ್ರ್ಯಾಜ್ಯುವೇಷನ್ ಕಾರ್ಯಕ್ರಮ ಇದೆ. ಅದರ ತಯಾರಿಗಾಗಿ ಮಾಡಿದ್ದೇವೆ ಎಂದು ಉತ್ತರ ನೀಡಿದ್ದರು. ಆದ್ರೆ ನಾವು ಈ ರೀತಿ ಮಾಡುವುದಕ್ಕೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತು ಶಿಕ್ಷೆ ನೀಡಿದ್ದೇವೆ. ಮುಂದೇ ಇದೇ ವಿದ್ಯಾರ್ಥಿಗಳು ಮತ್ತೆ ಈ ರೀತಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಮ್ಸ್ ನಿರ್ದೇಶಕರು ಹೇಳಿದ್ದಾರೆ.
ಓದಿ: ಆಪರೇಷನ್ ಥಿಯೇಟರ್ನಲ್ಲಿ ಪ್ರಿ ವೆಡ್ಡಿಂಗ್ ಶೂಟ್: ವೈದ್ಯ ಸೇವೆಯಿಂದಲೇ ಮದುಮಗ ವಜಾ