ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತ ಸಂಭವಿಸಿ ಇಂದಿಗೆ 14 ವರ್ಷಗಳು ಕಳೆದಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತಕ್ಕೀಡಾಗಿ ಇವತ್ತಿಗೆ 14 ವರ್ಷಗಳು ಗತಿಸಿವೆ. ಆ ಕರಾಳ ಘಟನೆಯಲ್ಲಿ 158 ಮಂದಿ ಮೃತಪಟ್ಟಿದ್ದರು.
2010ರ ಮೇ 22ರಂದು ಬೆಳಗ್ಗೆ 6 ಗಂಟೆ ವೇಳೆಗೆ ದುಬೈಯಿಂದ ಮಂಗಳೂರಿಗೆ ಬಂದಿದ್ದ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದರೂ, ಪೈಲಟ್ ಅಚಾತುರ್ಯದಿಂದ ರನ್ ವೇಯಲ್ಲಿ ಮುಂದಕ್ಕೆ ಹೋಗಿ, ಸೂಚನಾ ಗೋಪುರಕ್ಕೆ ಡಿಕ್ಕಿ ಹೊಡೆದು, ಆವರಣದ ಹೊರಗಿನ ಆಳವಾದ ಹೊಂಡಕ್ಕೆ ಬಿದ್ದಿತ್ತು. ಈ ದುರ್ಘಟನೆಯಲ್ಲಿ ಆರು ಸಿಬ್ಬಂದಿ ಸೇರಿದಂತೆ ಒಟ್ಟು 158 ಮಂದಿ ಸುಟ್ಟು ಕರಕಲಾಗಿದ್ದರು. ಮೃತರಲ್ಲಿ 135 ಮಂದಿ ವಯಸ್ಕರಿದ್ದರೆ, 19 ಮಂದಿ ಮಕ್ಕಳು, ನಾಲ್ಕು ಶಿಶುಗಳು ಸೇರಿದ್ದರು. ಇದರಲ್ಲಿ 8 ಮಂದಿ ಪವಾಡಸದೃಶ ಪಾರಾಗಿದ್ದರು. ಮೃತರಲ್ಲಿ ಕೇರಳದ ಕಾಸರಗೋಡು, ಕರ್ನಾಟಕದ ದಕ್ಷಿಣ, ಉಡುಪಿ, ಉತ್ತರ ಕನ್ನಡ ಜಿಲ್ಲೆಯವರಿದ್ದರು.
ವಿಮಾನ ಬಿದ್ದ ತಕ್ಷಣ ಬೆಂಕಿಯುಂಡೆಯಂತಾಗಿ, 12 ಮೃತದೇಹಗಳು ಸುಟ್ಟು ಕರಕಲಾಗಿ ಗುರುತು ಹಿಡಿಯಲು ಸಾಧ್ಯವಾಗದೆ, ಜಿಲ್ಲಾಡಳಿತದಿಂದ ಕೂಳೂರು ನದಿ ಬಳಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗಿತ್ತು. ಪ್ರತಿವರ್ಷ ವಿಮಾನ ದುರಂತದ ಸ್ಮಾರಕದಲ್ಲಿ ಜಿಲ್ಲಾಡಳಿತದಿಂದ ಸಂಸ್ಮರಣೆ ನಡೆಯುತ್ತದೆ.
ಮರೆಯಲಾಗದ ದಿನ: ಮಂಗಳೂರಿನ ಕೂಳೂರು ವಿಮಾನ ನಿಲ್ದಾಣ ಬಳಿಯ ವಿಮಾನ ದುರಂತ ಸ್ಮಾರಕದಲ್ಲಿ ಈ ದಿನ ಸಂಸ್ಮರಣೆ ನಡೆಯುತ್ತದೆ. ಇಂದು ನಡೆದ ಸಂಸ್ಮರಣೆ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಸೇರಿದಂತೆ ಅಧಿಕಾರಿಗಳು, ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಿಕರು ದುರಂತ ಸ್ಮಾರಕ ಬಳಿ ಮೌನ ಪ್ರಾರ್ಥನೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, 14 ವರ್ಷದ ಹಿಂದೆ ನಡೆದ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ ನೆನಪಿನಲ್ಲಿ ಮಾಡಿದ ಸ್ಮಾರಕಕ್ಕೆ ಜಿಲ್ಲಾಡಳಿತ, ಕುಟುಂಬದವರ ವತಿಯಿಂದ ವರ್ಷಾಚರಣೆ ಮಾಡಿದ್ದೇವೆ. ಅವರನ್ನು ಸ್ಮರಿಸುತ್ತ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಿ ಇದನ್ನು ಅರ್ಥಪೂರ್ಣವಾಗಿ ಮಾಡಿದ್ದೇವೆ'' ಎಂದರು.
ಇನ್ನು ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಕೆ.ಕೆ. ಶೆಟ್ಟಿ ಅವರ ಪುತ್ರಿ ಶ್ರೇಯಾ ಮಾತನಾಡಿ, ''ನನ್ನ ತಂದೆ ದುಬೈನಲ್ಲಿ ವ್ಯವಹಾರ ಮಾಡುತ್ತಿದ್ದರು. ಆ ದಿನ ನಡೆದ ದುರಂತದಲ್ಲಿ ಸಾವನ್ನಪ್ಪಿದ್ದರು. ಅವರು ದುಬೈ ಏರ್ಪೋರ್ಟ್ನಿಂದ ಕಾಲ್ ಮಾಡಿದ್ದರು. ವಿಮಾನ ದುರಂತದಲ್ಲಿ ಅವರ ದೇಹವನ್ನು ಗುರುತಿಸಲು ಆಗಿಲ್ಲ. ಅವರು ತಿಂಗಳಿಗೊಮ್ಮೆ ದುಬೈಗೆ ಹೋಗಿ ಬರುತ್ತಿದ್ದರು. ಪರಿಹಾರ ಸಿಕ್ಕಿದೆ'' ಎಂದು ತಿಳಿಸಿದರು.
ಪರಿಹಾರಕ್ಕಾಗಿ ಹೋರಾಟ ಸ್ಥಗಿತ: ನ್ಯಾಯಯುತ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಿರಂತರ ಹೋರಾಟ ನಡೆಸಿದ್ದ ಮಂಗಳೂರು ವಿಮಾನ ದುರಂತದ ಸಂತ್ರಸ್ತರು ಇದೀಗ ಹೋರಾಟ ಸ್ಥಗಿತ ಮಾಡಿದ್ದಾರೆ. ಅಂದು ಮೃತಪಟ್ಟವರ ಕುಟುಂಬ ಸದಸ್ಯರಿಗೆ ಏರ್ ಇಂಡಿಯಾ ವಿಮಾನ ಸಂಸ್ಥೆಯಿಂದ ಪರಿಹಾರ ಸಿಕ್ಕಿತ್ತು. ಆದರೆ, ಕೇಂದ್ರ ಸರಕಾರದ ಪರಿಹಾರ ಕಾಯ್ದೆಯಂತೆ ನ್ಯಾಯಯುತ ಕನಿಷ್ಠ ಮೊತ್ತ ನೀಡಿಲ್ಲ ಎಂದು ಮಂಗಳೂರು ವಿಮಾನ ದುರಂತ ಸಂತ್ರಸ್ತರ ಸಂಘವು ಅಬ್ದುಲ್ ಸಲಾಂ ಅವರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿತ್ತು. ಈ ಮಧ್ಯೆ, ವಿಮಾನ ದುರಂತ ಸಂತ್ರಸ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಬ್ಯಾರಿ, ನಂತರ ಕೋಶಾಧಿಕಾರಿ ಅಬ್ದುಲ್ ರಝಾಕ್ ತೀರಿಕೊಂಡರು. ಇದೀಗ ಯಾವುದೇ ಹೋರಾಟ ನಡೆಯುತ್ತಿಲ್ಲ.
ಇದನ್ನೂ ಓದಿ: ಪ್ರಜ್ವಲ್ ಪಾಸ್‌ಪೋರ್ಟ್ ರದ್ದತಿ ಕೇಂದ್ರ ಸರ್ಕಾರದ ಕರ್ತವ್ಯ: ಗೃಹ ಸಚಿವ ಜಿ.ಪರಮೇಶ್ವರ್ - G Parameshwara