ಬೆಂಗಳೂರು: ಮನಿ ಲಾಂಡರಿಂಗ್ ಆರೋಪದಡಿ ಸಿಬಿಐನಲ್ಲಿ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿ ವೃದ್ಧೆಯೊಬ್ಬರಿಗೆ 1.24 ಕೋಟಿ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. 83 ವರ್ಷದ ವೃದ್ಧೆಯೊಬ್ಬರು ನೀಡಿರುವ ದೂರಿನನ್ವಯ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರರಿಗೆ ಅಕ್ಟೋಬರ್‌ನಲ್ಲಿ ಕರೆ ಮಾಡಿದ್ದ ವಂಚಕರು ಮುಂಬೈ ಪೊಲೀಸರ ಸೋಗಿನಲ್ಲಿ ಮಾತನಾಡಿ, "ನಿಮ್ಮ ಹೆಸರಿನಲ್ಲಿ ಇನ್ನೊಂದು ನಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಮನಿ ಲಾಂಡರಿಂಗ್ ಮಾಡಲಾಗುತ್ತಿದೆ. ಸಿಬಿಐನ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ" ಎಂದು ಬೆದರಿಸಿದ್ದಾರೆ. ಬಳಿಕ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು, "ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿಮ್ಮ ಬ್ಯಾಂಕ್ ಖಾತೆಯ ಪರಿಶೀಲನೆ ಮಾಡಬೇಕಿದೆ. ನಾವು ಕೇಳಿದ ವಿವರಗಳನ್ನು ನೀಡಬೇಕು" ಎಂದಿದ್ದಾರೆ. ಅದರಂತೆ ದೂರುದಾರರ ಬ್ಯಾಂಕ್ ಖಾತೆ ಸೇರಿದಂತೆ ಮತ್ತಿತರ ವಿವರಗಳನ್ನು ಪಡೆದು, ತನಿಖಾ ಪ್ರಕ್ರಿಯೆಯ ಹೆಸರಿನಲ್ಲಿ ವಾಪಸ್ ವರ್ಗಾವಣೆ ಮಾಡುವುದಾಗಿ ಹಂತ ಹಂತವಾಗಿ 1.24 ಕೋಟಿ ಹಣ ವರ್ಗಾಯಿಸಿಕೊಂಡಿದ್ದಾರೆ.
ಎರಡು ತಿಂಗಳುಗಳಾದರೂ ಮತ್ತೆ ಸಂಪರ್ಕಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪರಿಶೀಲಿಸಿದಾಗ ದೂರುದಾರರಿಗೆ ತಾವು ವಂಚನೆಗೊಳಗಾಗಿರುವುದು ತಿಳಿದಿದೆ. ವಂಚನೆಗೊಳಗಾದ ವೃದ್ಧೆ ನೀಡಿದ ದೂರಿನನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಆನ್ಲೈನ್ ಹೂಡಿಕೆ ಹೆಸರಿನಲ್ಲಿ ₹88 ಲಕ್ಷ ವಂಚಿಸಿದ್ದ 10 ಮಂದಿ ಸೆರೆ