ನವದೆಹಲಿ: 2024ರ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (WPL) ದೆಹಲಿ ಕ್ಯಾಪಿಟಲ್ಸ್ ತಂಡವು ಅತ್ಯುತ್ತಮ ಪ್ರದರ್ಶನ ಮುಂದುವರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ಮತ್ತು ಜೆಮಿಮಾ ರಾಡ್ರಿಗಸ್ ಅವರ ಅರ್ಧಶತಕಗಳ ಬಲದಿಂದ ಡೆಲ್ಲಿ ತಂಡವು ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿತು.
ಲ್ಯಾನಿಂಗ್ 38 ಎಸೆತಗಳಲ್ಲಿ 53 ರನ್ ಗಳಿಸಿದರೆ, ಜೆಮಿಮಾ 33 ಎಸೆತಗಳಲ್ಲಿ 69 ರನ್ ಹೊಡೆದರು. ಇದರಿಂದಾಗಿ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗೆ 163 ರನ್‌ಗಳಿಸಷ್ಟೇ ಸಾಧ್ಯವಾಯಿತು.
ಡೆಲ್ಲಿಗೆ ಸತತ 4 ಗೆಲುವು: ಲೀಗ್ ಇತಿಹಾಸದಲ್ಲಿ ರನ್ ಚೇಸಿಂಗ್ ಮಾಡುವಾಗ ಮುಂಬೈ ಇದೇ ಮೊದಲ ಬಾರಿಗೆ ಸೋಲು ಅನುಭವಿಸಿತು. ಮುಂಬೈ ತಂಡವು ಈವರೆಗೆ ಪಾಲ್ಗೊಂಡ ಐದು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಇದೀಗ ದೆಹಲಿ ಮುಂಬೈಗಿಂತ ಮುನ್ನಡೆ ಪಡೆದಿದ್ದು, ಈ ಗೆಲುವಿನೊಂದಿಗೆ ಸತತ ನಾಲ್ಕನೇ ಪಂದ್ಯ ಗೆದ್ದಂತಾಯಿತು.
ಲ್ಯಾನಿಂಗ್, ಜೆಮಿಮಾ ಸ್ಫೋಟಕ ಇನಿಂಗ್ಸ್: ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಜೆಮಿಮಾ ರಾಡ್ರಿಗಸ್ ಬಿರುಸಿನ ಇನಿಂಗ್ಸ್ ಆಡಿದರು. ಲ್ಯಾನಿಂಗ್ ಆಟದಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿದ್ದವು. ಪ್ರಸಕ್ತ ಋತುವಿನಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು. ಇನ್ನು ಜೆಮಿಮಾ ಎಂಟು ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿದರು. ಇವರಿಬ್ಬರ ಸ್ಫೋಟಕ ಆಟದ ಫಲವಾಗಿ ತಂಡದ ಸ್ಕೋರ್ 200 ರನ್‌ಗಳ ಸಮೀಪ ತಲುಪಿತು.
ಮುಂಬೈ ಇಂಡಿಯನ್ಸ್ ಪರ ಪೂಜಾ ವಸ್ತ್ರಾಕರ್ ಅತ್ಯುತ್ತಮ ಬೌಲರ್ ಎನಿಸಿಕೊಂಡರು. ನಾಲ್ಕು ಓವರ್‌ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಉರುಳಿಸಿದರು. ಸೈಕಾ ಇಶಾಕ್ 29 ರನ್‌ಗಳಿಗೆ ಒಂದು ವಿಕೆಟ್, ಶಬ್ನಿಮ್ ಇಸ್ಮಾಯಿಲ್ 46 ರನ್‌ಗಳಿಗೆ ಒಂದು ವಿಕೆಟ್ ಹಾಗೂ ಹೇಲಿ ಮ್ಯಾಥ್ಯೂಸ್ 23 ರನ್‌ಗಳಿಗೆ ಒಂದು ವಿಕೆಟ್ ಗಳಿಸಿದರು.
ಇದನ್ನೂ ಓದಿ: ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಸೋಲು: ನಾಯಕನ ವಿರುದ್ಧ ಅತೃಪ್ತಿ ಹೊರಹಾಕಿದ ಕೋಚ್ಗೆ ಕಾರ್ತಿಕ್ ಕ್ಲಾಸ್