ಬೆಂಗಳೂರು: ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಅದ್ಭುತ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಸತತ ಮೂರನೇ ಜಯ ದಾಖಲಿಸಿತು. ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 25 ರನ್‌ಗಳಿಂದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.
ಬ್ಯಾಟಿಂಗ್, ಬೌಲಿಂಗ್ನಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡದಂತೆ ಸುಧಾರಿತ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಮಹಿಳೆಯರು ಗುಜರಾತ್ ಅನ್ನು ಸಲೀಸಾಗಿ ಮಣಿಸಿದರು. ಮೊದಲು ಬ್ಯಾಟ್ ಮಾಡಿ 8 ವಿಕೆಟ್ಗೆ 163 ರನ್ ಗುರಿ ನೀಡಿತು. ಜೆಸ್ ಜೊನಾಸ್ಸೆನ್ ಮತ್ತು ರಾಧಾ ಯಾದವ್ ಅವರ ನಿಖರ ದಾಳಿಗೆ ಸಿಲುಕಿದ ಬೆತ್ ಮೂನಿ ಪಡೆ 138 ರನ್ ಗಳಿಸಲಷ್ಟೇ ಶಕ್ತವಾಗಿ ಸತತ ನಾಲ್ಕನೇ ಸೋಲು ಅನುಭವಿಸಿತು.
ಸದ್ದು ಮಾಡದ ಬ್ಯಾಟಿಂಗ್ ಪಡೆ: ಕಠಿಣ ಸವಾಲು ಎದುರಿಗಿದ್ದರೂ ಗುಜರಾತ್ ಮಹಿಳೆಯರು ಗೆಲುವಿನ ಸನಿಹಕ್ಕೂ ಬರಲಿಲ್ಲ. ಮೊದಲ 50 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಬೆತ್ ಮೂನಿ 12, ಲೌರಾ ವಾಲ್ವರ್ಟ್ 0, ಲಿಚ್ಫೀಲ್ಡ್ 15, ವೇದ 12 ರನ್ಗೆ ವಿಕೆಟ್ ನೀಡಿದರು.
ಸತತ ವಿಕೆಟ್ ಬೀಳುತ್ತಿದ್ದರೂ ಆಸ್ಟ್ರೇಲಿಯಾದ ಕ್ರಿಕೆಟರ್ ಆಶ್ಲೀಗ್ ಗಾರ್ಡ್ನರ್ ರನ್ ಪೇರಿಸುವ ಕೆಲಸ ಮಾಡಿದರು. 31 ಎಸೆತಗಳಲ್ಲಿ 40 ರನ್ ಗಳಿಸಿದ ಗಾರ್ಡ್ನರ್ ಅವರು ಜೊನಾಸ್ಸನ್ ಎಸೆತದಲ್ಲಿ ವಿಕೆಟ್ ನೀಡಿದರು. ಇದರ ಬಳಿಕ ಮತ್ತೆ ಕುಸಿತಕ್ಕೀಡಾದ ತಂಡ ಕೊನೆಯಲ್ಲಿ 138ಕ್ಕೆ ಆಟ ಮುಗಿಸಿ 25 ರನ್‌ಗಳಿಂದ ಸೋಲು ಕಂಡಿತು. ಗುಜರಾತ್ ಟೂರ್ನಿಯಲ್ಲಿ ತಾನಾಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರಿಯಿತು.
ಲ್ಯಾನಿಂಗ್ ಅರ್ಧಶತಕ: ಡೆಲ್ಲಿ ಕ್ಯಾಪಿಟಲ್ಸ್ನ ಜೆಸ್ ಜೊನಾಸ್ಸೆನ್ ಮತ್ತು ರಾಧಾ ಯಾದವ್ ಅವರು ತಲಾ ಮೂರು ವಿಕೆಟ್ ಪಡೆಯುವ ಮೂಲಕ ಗುಜರಾತ್ ಬ್ಯಾಟಿಂಗ್ ಬಲ ಕುಗ್ಗಿಸಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರ ಅರ್ಧಶತಕ ಮತ್ತು ಅಲಿಸಿ ಕ್ಯಾಪ್ಸಿ, ಸದರ್ಲ್ಯಾಂಡ್ರ ನೆರವಿನಿಂದ 163 ರನ್ಗಳ ಸವಾಲಿನ ಗುರಿ ನೀಡಿತು.
ಭರ್ಜರಿ ಬ್ಯಾಟ್ ಬೀಸಿದ ಮೆಗ್ ಲ್ಯಾನಿಂಗ್ 41 ಎಸೆತಗಳಲ್ಲಿ 55 ರನ್ ಗಳಿಸಿದರು. 'ಲೇಡಿ ವೀರೇಂದ್ರ ಸೆಹ್ವಾಗ್' ಖ್ಯಾತಿಯ ಶೆಫಾಲಿ ವರ್ಮಾ 13 ರನ್ ಗಳಿಸಿದರು. ಬಳಿಕ ಬಂದ ಅಲಿಸಿ ಕ್ಯಾಪ್ಸಿ 17 ಎಸೆತಗಳಲ್ಲಿ 27 ರನ್, ಸದರ್ಲ್ಯಾಂಡ್ 12 ಎಸೆತಗಳಲ್ಲಿ 20 ರನ್ ಚಚ್ಚಿದರು. ತಂಡ ಸೋತರೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮೇಘನಾ ಸಿಂಗ್ 4 ವಿಕೆಟ್ ಕಬಳಿಸಿದರು. ಆಶ್ಲೀಗ್ ಗಾರ್ಡ್ನರ್ 2 ವಿಕೆಟ್ ಕಿತ್ತರು.
ಇದನ್ನೂ ಓದಿ: ಮಹಿಳಾ ಐಪಿಎಲ್: ಆರ್ಸಿಬಿಗೆ ಸತತ 2ನೇ ಸೋಲು, ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್