ನವದೆಹಲಿ: MAX60 ಕೆರಿಬಿಯನ್ ಲೀಗ್ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ಬ್ಯಾಟರ್ ಕಾರ್ಲೋಸ್ ಬ್ರಾಥ್‌ವೈಟ್ ಕೋಪದಿಂದ ತಮ್ಮ ಹೆಲ್ಮೆಟ್ ಅನ್ನು ಬ್ಯಾಟ್‌ನಿಂದ ಬಾರಿಸಿ ಒಡೆದು ಹಾಕಿದ್ದಾರೆ. ಶನಿವಾರ ನಡೆದ ನ್ಯೂಯಾರ್ಕ್ ಸ್ಟ್ರೈಕರ್ಸ್ ಮತ್ತು ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ.
ಈ ಪಂದ್ಯದಲ್ಲಿ ತಿಸಾರ ಪೆರೇರಾ ನಾಯಕತ್ವದ ನ್ಯೂಯಾರ್ಕ್ ಸ್ಟ್ರೈಕರ್ಸ್ ಮೊದಲು ಬ್ಯಾಟ್ ಮಾಡಿತ್ತು. ಕಾರ್ಲೋಸ್ ಬ್ರಾಥ್‌ವೈಟ್ ಬ್ಯಾಟಿಂಗ್‌ಗೆ ಬರುವ ವೇಳೆ ಸ್ಟ್ರೈಕರ್ಸ್ ತಂಡ 74 ರನ್‌ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡಿತ್ತು. ನಂತರ ಕ್ರೀಸ್ಗಿಳಿದಿದ್ದ ಬ್ರಾಥ್‌ವೈಟ್, 4 ಎಸೆತಗಳಲ್ಲಿ 7 ರನ್ ಗಳಿಸಿದ್ದರು. ಇನಿಂಗ್ಸ್‌ನ 9ನೇ ಓವರ್ನಲ್ಲಿ ಜೋಶುವಾ ಲಿಟಲ್ ಎಸೆದ ಶಾರ್ಟ್ ಬಾಲ್ ಅನ್ನು ಪುಲ್ ಶಾಟ್ ಹೊಡೆಯಲು ಬ್ರಾಥ್‌ವೈಟ್ ಪ್ರಯತ್ನಿಸಿದರು. ಆದರೆ, ಬ್ಯಾಟ್ ಬದಲಿಗೆ ಬೌಲ್ ಭುಜಕ್ಕೆ ತಾಕಿ ವಿಕೆಟ್ ಕೀಪರ್ ಕೈಸೇರಿತ್ತು.
Remember the name.. Carlos Brathwaite..#WestIndiescricket power 💪😀😀#Cricket #ICC #BCCI #Telegram #Garime pic.twitter.com/YNrA74rDOe
— Tr. Mahaveer Gora (@MahaveerJatGora) August 26, 2024
ನಂತರ ಎದುರಾಳಿ ತಂಡ ಔಟ್ಗಾಗಿ ಅಂಪೈರ್ಗೆ ಮನವಿ ಮಾಡಿತ್ತು. ಮನವಿಗೆ ಒಪ್ಪಿಗೆ ಸೂಚಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಕೋಪಗೊಂಡ ಬ್ರಾಥ್‌ವೈಟ್ ಪೆವಿಲಿಯನ್ಗೆ ಮರಳುವ ವೇಳೆ ಬೌಂಡರಿ ಲೈನ್ ಬಳಿ ತಲುಪುತ್ತಿದ್ದಂತೆ, ತಾವು ಧರಿಸಿದ್ದ ಹೆಲ್ಮೇಟ್ ತೆಗೆದು, ಬ್ಯಾಟ್‌ನಿಂದ ಚೆಂಡಿನಂತೆ ಹೊಡೆದು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ. ಇದರ ವಿಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ಪಂದ್ಯವನ್ನು ಗೆಲ್ಲುವ ಮೂಲಕ ಕಾರ್ಲೋಸ್ ಬ್ರಾಥ್‌ವೈಟ್ ತಂಡ ನ್ಯೂಯಾರ್ಕ್ ಸ್ಟ್ರೈಕರ್ಸ್ ಫೈನಲ್‌ಗೆ ಪ್ರವೇಶಿಸಿತ್ತು. ಪ್ರಶಸ್ತಿ ಹಣಾಹಣಿಯಲ್ಲಿ ನ್ಯೂಯಾರ್ಕ್ ಕೆರಿಬಿಯನ್ ಟೈಗರ್ಸ್ ತಂಡವನ್ನು ಎದುರಿಸಿತ್ತು. ಆದರೆ, ಫೈನಲ್ ಹಣಾಹಣಿಯಲ್ಲಿ ಸ್ಟ್ರೈಕರ್ಸ್ ನೀಡಿದ್ದ 126 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಸ್ಟ್ರೈಕರ್ಸ್ ತಂಡ, 69 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 56 ರನ್‌ಗಳಿಂದ ಸೋಲುಂಡು ಚಾಂಪಿಯನ್ ಪಟ್ಟಕ್ಕೇರುವ ಅವಕಾಶ ಕಳೆದುಕೊಂಡಿತು.
ಕಾರ್ಲೋಸ್ ಬ್ರಾಥ್‌ವೈಟ್ ಕೊನೆಯ ಬಾರಿಗೆ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ನಂತರ ಅವರು ಹೆಚ್ಚಾಗಿ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.