ಮುಂಬೈ(ಮಹಾರಾಷ್ಟ್ರ): ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ. ಆದರೆ, ಆರಂಭದ ಮೂರು ಪಂದ್ಯಗಳನ್ನು ತಂಡ ಸೋತಿರುವುದಕ್ಕೆ ಹಾರ್ದಿಕ್ ಬಗ್ಗೆ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಮುಂಬೈ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುವುದು ಮತ್ತು ಕಿಚಾಯಿಸುವುದು ಸಾಮಾನ್ಯವಾಗುತ್ತಿದೆ. ಇಂತಹದ್ದೇ ಸನ್ನಿವೇಶ ಗುರುವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಿತು. ಆದರೆ, ಈ ವೇಳೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ, ಪಾಂಡ್ಯ ಅವರನ್ನು ಗೇಲಿ ಮಾಡುತ್ತಿದ್ದ ಜನರಿಗೆ ತಿಳಿ ಹೇಳಿದ ಪ್ರಸಂಗ ನಡೆಯಿತು.
-
Virat Kohli was upset with the crowd when they boo at Hardik Pandya he asked the crowd to stop and they replied with Hardik-Hardik Chants.❤️
— 𝐂𝐄𝐎⚔️🚩☠️ (@ChampuChoudhary) April 11, 2024
Only a heartless person can hate this man. #MIvsRCB #RCBvsMI #RCBvMI #HardikPandya #surya #SuryaKumarYadav #RohitSharma𓃵 #ViratKohli pic.twitter.com/v5vlrYEBQv
ಮಾರ್ಚ್ 11ರಂದು ಐಪಿಎಲ್ನ 25ನೇ ಪಂದ್ಯದಲ್ಲಿ ಮುಂಬೈ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಗ್ಯಾಲರಿಯಿಂದ ಅಭಿಮಾನಿಗಳು ಪಾಂಡ್ಯ ಬಗ್ಗೆ ಲೇವಡಿ ಮಾಡುತ್ತಿದ್ದರು. ಈ ವೇಳೆ, ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಫಾನ್ಸ್ಗೆ ಆ ರೀತಿ ವರ್ತಿಸದಂತೆ ಸನ್ನೆ ಮಾಡಿದರು. ಇದರ ಬದಲು ಪಾಂಡ್ಯರನ್ನು ಬೆಂಬಲಿಸುವಂತೆ ಸೂಚಿಸಿದರು. ಇದರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿವೆ. ಕೊಹ್ಲಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಆರ್ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ನಂತರದ ಇನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಬಂದ ಪಾಂಡ್ಯ ಕುರಿತು ಅಭಿಮಾನಿಗಳು ಅಪಹಾಸ್ಯ ಮಾಡುತ್ತಿದ್ದರು. ಹಿರಿಯ ಆಟಗಾರ ರೋಹಿತ್ ಶರ್ಮಾ ಔಟಾದ ನಂತರ ಪಾಂಡ್ಯ ಕ್ರೀಸ್ಗೆ ಬರುತ್ತಿದ್ದಂತೆ ಕೂಗಾಡಲು ಶುರು ಮಾಡಿದ್ದರು. ಕೂಡಲೇ ಕೊಹ್ಲಿ, 'ಹಾರ್ದಿಕ್ ಭಾರತೀಯ ಕ್ರಿಕೆಟ್ ತಂಡದ ಸದಸ್ಯ' ಎಂದು ಅಭಿಮಾನಿಗಳಿಗೆ ನೆನಪಿಸಿ, ಅವರ ಬೆಂಬಲಕ್ಕೆ ನಿಲ್ಲುವಂತೆ ಸನ್ನೆ ಮಾಡಿದ್ದು, ವಿಡಿಯೋದಲ್ಲಿ ಕಾಣಬಹುದಾಗಿದೆ.
30 ವರ್ಷದ ಆಲ್ರೌಂಡರ್ ಪಾಂಡ್ಯ ಆರಂಭದಲ್ಲಿ ಮುಂಬೈ ತಂಡದ ಭಾಗವಾಗಿದ್ದರು. ನಂತರದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೇರಿಕೊಂಡಿದ್ದರು. ಇವರ ನಾಯಕತ್ವದಲ್ಲಿ ಗುಜರಾತ್ ತಂಡವು 2022ರಲ್ಲಿ ತನ್ನ ಮೊದಲ ಟೂರ್ನಿಯಲ್ಲೇ ಟ್ರೋಫಿ ಎತ್ತಿಹಿಡಿದಿತ್ತು. ಕಳೆದ ನವೆಂಬರ್ನಲ್ಲಿ ಪಾಂಡ್ಯರನ್ನು ಮುಂಬೈ ಸೆಳೆದುಕೊಂಡಿದೆ. ಅಲ್ಲದೇ, ತಂಡದ ನಾಯಕತ್ವವನ್ನೂ ಅವರಿಗೆ ವಹಿಸಿದೆ.
ಹೀಗಾಗಿ ಪ್ರಸ್ತುತ ಟೂರ್ನಿ ಬಗ್ಗೆ ಮುಂಬೈ ಸಾಕಷ್ಟು ನಿರೀಕ್ಷೆ ಹೊಂದಿದೆ. ಆದರೆ, ಆರಂಭಿಕ ಮೂರು ಪಂದ್ಯಗಳ ಸತತ ಸೋಲು ನಿರಾಸೆ ಮೂಡಿಸಿದೆ. ಆದ್ದರಿಂದ ಸಹಜವಾಗಿಯೇ ನಾಯಕ ಪಾಂಡ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಮುಂಬೈ ತನ್ನ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಮತ್ತು ಐದನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆದ್ದು ಟೂರ್ನಿಯಲ್ಲಿ ಮತ್ತೆ ಪುಟಿದೆದ್ದಿದೆ.
ಇದನ್ನೂ ಓದಿ: IPL 2024: ಡೆಲ್ಲಿ ವಿರುದ್ಧ ಮುಂಬೈಗೆ ಜಯ: ಗೆಲುವಿನ ಖಾತೆ ತೆರೆದ ಪಾಂಡ್ಯ ಪಡೆ - MI vs DC