ಕೋಲ್ಕತ್ತಾ : ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ಗೆ 209 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನೀಡಿದೆ. ಆಂಡ್ರೆ ರಸೆಲ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಕೋಲ್ಕತ್ತಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಬಂದ ಕೆಕೆಆರ್ ಗೆ ಉತ್ತಮ ಆರಂಭ ಸಿಗಲಿಲ್ಲ. ಫಿಲ್ ಸಾಲ್ಟ್ ಜೊತೆಗೆ ಓಪನಿಂಗ್ ಮಾಡಲು ಬಂದ ಸುನಿಲ್ ನರೈನ್ (2) ಬೇಗನೆ ರನ್ ಔಟ್ ಆದರು. ಇದರ ಹಿಂದೆಯೇ ವೆಂಕಟೇಶ್ ಅಯ್ಯರ್ (7), ನಾಯಕ ಶ್ರೇಯಸ್ ಅಯ್ಯರ್ (0) ಮತ್ತು ನಿತೀಶ್ ರಾಣಾ (9) ವಿಕೆಟ್ ಕಳೆದುಕೊಂಡು ಮಧ್ಯಮ ಕ್ರಮಾಂಕ ಕುಸಿತ ಕಂಡಿತ್ತು.
ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು 51 ರನ್ಗಳಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ಫಿಲ್ ಸಾಲ್ಟ್ ಹಾಗು ರಮಣದೀಪ್ ಸಿಂಗ್ ಆಸರೆಯಾದರು. ಆದರೇ ಹೈದಾರಬಾದ್ ನಾಯಕ ಪ್ಯಾಟ್ ಕಮಿನ್ಸ್, ರಮಣದೀಪ್ (35) ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಐದನೇ ವಿಕೆಟ್‌ಗೆ ಒಂದಾದ ಫಿಲ್ ಸಾಲ್ಟ್ ಹಾಗು ರಮಣದೀಪ್ ಸಿಂಗ್ ಜೋಡಿ 29 ಎಸೆತಗಳಲ್ಲಿ 54 ರನ್ ಗಳಿಸಿತ್ತು.
ತಮ್ಮ ಹೊಡಿ ಬಡಿ ಆಟಕ್ಕೆ ಹೆಸರು ವಾಸಿಯಾಗಿರುವ ಫಿಲ್ ಸಾಲ್ಟ್ ನಿರಾಳವಾಗಿ ಬ್ಯಾಟಿಂಗ್ ಮಾಡಿದರು. 40 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿ ಫ್ರಾಂಚೈಸಿ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಮಯಾಂಕ್ ಮಾರ್ಕಾಂಡೆ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು.
ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಟಾರ್ ಕೆರಿಬಿಯನ್ ಆಲ್ ರೌಂಡರ್ ಆಂಡ್ರಿ ರಸೆಲ್ ಅಮೋಘ ಬ್ಯಾಟಿಂಗ್ ನಡೆಸಿದರು. ತವರಿನಲ್ಲಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದ ರಸೆಲ್ ಆರ್ಭಟಿಸಿದರು. ಸ್ಪಿನ್ ಬೌಲರ್‌ಗಳು ಹಾಗೂ ವೇಗದ ಬೌಲರ್‌ಗಳನ್ನು ಲೆಕ್ಕಿಸದೆ ಬ್ಯಾಟ್ ಮಾಡಿದ ರಸೆಲ್ ತಮ್ಮ ನೈಜ ಆಟದ ಮೂಲಕ ಎದುರಾಳಿಗಳಿಗೆ ಕಾಡಿದರು. ಇವರ ಬೀರುಸಿನ ಆಟದ ಪರಿಣಾಮ ಅಂತಿಮವಾಗಿ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 208 ರನ್ ಸೇರಿಸಿತು. ಇನ್ನು ಹೈದಾರಬಾದ್ ಪರ ಟಿ. ನಟರಾಜನ್ 3 ವಿಕೆಟ್, ಮಯಾಂಕ್ ಮಾರ್ಕಂಡೆ 2 ವಿಕೆಟ್ ಹಾಗು ಮಾರ್ಕೊ ಜಾನ್ಸನ್ ಒಂದು ವಿಕೆಟ್ ಪಡೆದರು.
ತಂಡಗಳು : ಸನ್‌ರೈಸರ್ಸ್ ಹೈದರಾಬಾದ್ : ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಂ, ಹೆನ್ರಿಚ್ ಕ್ಲಾಸೆನ್(ವಿಕೀ), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್
ಕೋಲ್ಕತ್ತಾ ನೈಟ್ ರೈಡರ್ಸ್ : ಫಿಲಿಪ್ ಸಾಲ್ಟ್ (ವಿಕೀ), ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಇದನ್ನೂ ಓದಿ : ಐಪಿಎಲ್ 2024: ಡೆಲ್ಲಿ ವಿರುದ್ಧ ಶುಭಾರಂಭ ಮಾಡಿದ ಪಂಜಾಬ್: ಅರ್ಧಶತಕ ಸಿಡಿಸಿದ ಸ್ಯಾಮ್ ಕರ್ರನ್ - IPL 2024