ಹೈದರಾಬಾದ್: ಈ ಸಲದ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ನೀಡುತ್ತಿರುವ ಪ್ರದರ್ಶನ ವ್ಯೂಹೆಗೂ ನಿಲುಕದ್ದಾಗಿದೆ. ಖತರ್ನಾಕ್ ತಂಡವಾಗಿ ಗುರುತಿಸಿಕೊಂಡಿದ್ದು, ಬುಧವಾರ ರಾತ್ರಿ ನಡೆದ ಲಖನೌ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ರ ಬಿರುಗಾಳಿ ಬ್ಯಾಟಿಂಗ್ನಿಂದಾಗಿ ಲಖನೌ ನೀಡಿದ್ದ 165 ರನ್ಗಳ ಸಾಧಾರಣ ಮೊತ್ತವನ್ನು ಬರೀ 9.4 ಓವರ್ಗೆ ತಲುಪಿ ಅಚ್ಚರಿ ಮೂಡಿಸಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರು.
ಡೇಂಜರಸ್ ಫಿನಿಶಿಂಗ್: ದೊಡ್ಡ ಗುರಿಯೇನೂ ಅಲ್ಲದ ಪಂದ್ಯದಲ್ಲಿ ಹೈದರಾಬಾದ್ ತಂಡ ಯಾರೂ ಊಹಿಸದ ಮಾದರಿಯಲ್ಲಿ ಬ್ಯಾಟಿಂಗ್ ಮಾಡಿತು. ವಿಶ್ವಕಪ್ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರೂ, ಬ್ಯಾಟಿಂಗ್ ಖದರ್ ಮುಂದುವರಿಸಿರುವ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 6 ಸಿಕ್ಸರ್ 8 ಬೌಂಡರಿ ಸಮೇತ ಔಟಾಗದೇ 75 ರನ್ ಗಳಿಸಿದರು.
ವಿಶ್ವಕಪ್ನಲ್ಲಿ ತಾನೇನು ಮಾಡುವೆ ಎಂಬಂತೆ ಅಬ್ಬರಿಸಿದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ ಔಟಾಗದೇ 89 ರನ್ ಚಚ್ಚಿದರು. ಇವರ ಇನಿಂಗ್ಸ್ನಲ್ಲಿ ತಲಾ 8 ಸಿಕ್ಸರ್, ಬೌಂಡರಿಗಳಿದ್ದವು. ಇಬ್ಬರು ಆಟಗಾರರ ಸ್ಟ್ರೈಕ್ರೇಟ್ ಕ್ರಮವಾಗಿ 267.86, 296.67 ಇತ್ತು. 6 ಓವರ್ಗಳ ಪವರ್ಪ್ಲೇನಲ್ಲಿ 107 ರನ್ ಕಲೆಹಾಕಿತ್ತು.
ಲಖನೌಗೆ ಆಘಾತ: ಪ್ಲೇಆಫ್ ರೇಸ್ನಲ್ಲಿರುವ ಲಖನೌ ಆಘಾತಕಾರಿ ಫಲಿತಾಂಶ ಕಂಡಿತು. ಬ್ಯಾಟಿಂಗ್ನಲ್ಲಿ ಮಿಂಚಲು ಎಡವಿದ ತಂಡ ಭಾರೀ ಬೆಲೆ ತೆತ್ತಿತು. ನಾಯಕ ಕೆಎಲ್ ರಾಹುಲ್ 29, ಕ್ವಿಂಟನ್ ಡಿ ಕಾಕ್ 2, ಮಾರ್ಕಸ್ ಸ್ಟೊಯಿನೀಸ್ 3 ರನ್ಗೆ ವಿಕೆಟ್ ನೀಡಿದರು. ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಬಂದ ಕೃನಾಲ್ ಪಾಂಡ್ಯ 21 ಎಸೆತದಲ್ಲಿ 24 ರನ್ ಗಳಿಸಿದರು.
ಪೂರನ್- ಬದೌನಿ ನೆರವು: ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದರಿಂದ ಲಖನೌ 11 ಓವರ್ಗಳಲ್ಲಿ 4 ವಿಕೆಟ್ಗೆ 66 ರನ್ ಮಾತ್ರ ಗಳಿಸಿತ್ತು. ಈ ವೇಳೆ ಕಣಕ್ಕಿಳಿದ ನಿಕೋಲಸ್ ಪೂರನ್ ಮತ್ತು ಆಯುಷ್ ಬದೌನಿ ರನ್ ಕಲೆಹಾಕಲು ಮುಂದಾದರು. ಇಬ್ಬರೂ ಸೇರಿ 5ನೇ ವಿಕೆಟ್ಗೆ 99 ರನ್ಗಳ ಸಹಭಾಗಿತ್ವ ನೀಡಿದರು.
ಬದೌನಿ 9 ಬೌಂಡರಿ ಸಮೇತ 55 ರನ್ ಸಿಡಿಸಿದರೆ, ಪೂರನ್ 48 ರನ್ ಮಾಡಿದರು. ಇದರಿಂದ ತಂಡ 165 ರನ್ ಗಳಿಸಲು ಸಾಧ್ಯವಾಯಿತು. 12 ಪಾಯಿಂಟ್ಗಳೊಂದಿಗೆ ಲಖನೌ ಪಾಯಿಂಟ್ ಪಟ್ಟಿಯಲ್ಲಿ 6 ನೇ ಸ್ಥಾನಕ್ಕೆ ಕುಸಿಯಿತು.
ಇದನ್ನೂ ಓದಿ: DUCK OUT ಎಂದರೇನು? ಕ್ರಿಕೆಟ್ನಲ್ಲಿ ಎಷ್ಟು ಡಕ್ ಔಟ್ಗಳಿವೆ ನಿಮಗೆ ಗೊತ್ತಾ? - duck out in cricket