ಹೊಸದಿಲ್ಲಿ: ಜೂನ್ 1ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಭಾರತ ಕ್ರಿಕೆಟ್ ತಂಡದ ಮೊದಲ ಆಯ್ಕೆಯ ವಿಕೆಟ್‌ಕೀಪರ್-ಬ್ಯಾಟರ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಟಿ20 ವಿಶ್ವಕಪ್‌ಗೆ 15 ಆಟಗಾರರ ತಂಡವನ್ನು ಅನಾವರಣಗೊಳಿಸಲು ಮೇ 1 ಕೊನೆಯ ದಿನಾಂಕವಾಗಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ಕ್ಷಣದಲ್ಲಾದರೂ ತಂಡವನ್ನು ಪ್ರಕಟಿಸಬಹುದು. ಜೂ.1ರಿಂದ 29ರವರೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ(ಯುಎಸ್ಎ) ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯ ವಹಿಸಲಿರುವ ವಿಶ್ವಕಪ್‌ಗೆ ಟೀಂ ಇಂಡಿಯಾ ಹೇಗಿರುತ್ತದೆ ಎಂಬ ಕುತೂಹಲವಿದೆ.
ಇದೀಗ ರಿಷಬ್ ಪಂತ್, ಇಶಾನ್ ಕಿಶನ್, ಕೆ.ಎಲ್.ರಾಹುಲ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಉನ್ನತ ದರ್ಜೆಯ ವಿಕೆಟ್ಕೀಪರ್ಗಳ ಪೈಪೋಟಿ ನಡುವೆ ಸಂಜು ಸ್ಯಾಮ್ಸನ್ ಮೊದಲ ವಿಕೆಟ್ ಕೀಪರ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಸದ್ಯ ನಡೆಯುತ್ತಿರುವ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವಿಕೆಟ್ ಕೀಪರ್ ಕಂ ಬಲಗೈ ಬ್ಯಾಟರ್ ಸಂಜು ಸ್ಯಾಮ್ಸನ್ ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತೀಯ ತಂಡಕ್ಕೆ ಮೊದಲ ವಿಕೆಟ್‌ಕೀಪರ್ ಆಗಿ ಆಯ್ಕೆಯಾಗಬುಹುದು. ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಹಳ ದಿನಗಳ ಬಳಿಕ ಮೈದಾನಕ್ಕೆ ಮರಳಿರುವ ರಿಷಬ್ ಪಂತ್ ಕೂಡ ತಮ್ಮ ಉತ್ತಮ ಪ್ರದರ್ಶನದಿಂದ ಕ್ರೀಡಾಭಿಮಾನಿಗಳನ್ನು ಅಚ್ಚರಿಗೊಳಿಸುತ್ತಿದ್ದಾರೆ. ಸಾಲದೆಂಬಂತೆ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಕೂಡ ಉತ್ತಮ ವಿಕೆಟ್ ಕೀಪರ್ ಕಂ ಬ್ಯಾಟರ್ ಆಗಿ ಹೊರಹೊಮ್ಮುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಸ್ಟಾರ್ ಇಶಾನ್ ಕಿಶನ್ ಕೂಡ ಪ್ರಾಥಮಿಕ ಕೀಪರ್-ಬ್ಯಾಟರ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿರುವ ಇತರ ಆಟಗಾರಲ್ಲಿ ಒಬ್ಬರಾಗಿದ್ದಾರೆ ಎಂದು ಕ್ರೀಡಾ ಪತ್ರಿಕೆಯೊಂದು ವರದಿ ಮಾಡಿದೆ.
ಸಂಜು ಸ್ಯಾಮ್ಸನ್ ಪ್ರಸಕ್ತ ಐಪಿಎಲ್ ಋತುವಿನಲ್ಲಿ 9 ಪಂದ್ಯಗಳಲ್ಲಿ 385 ರನ್ ಗಳಿಸಿದ್ದಾರೆ. 6 ಕ್ಯಾಚ್ ಮತ್ತು 1 ಸ್ಟಂಪಿಂಗ್ ಮಾಡಿದ್ದಾರೆ. ರಿಷಬ್ ಪಂತ್ 10 ಪಂದ್ಯಗಳಲ್ಲಿ 371 ರನ್ ಗಳಿಸಿದ್ದಾರೆ. 11 ಕ್ಯಾಚ್ ಮತ್ತು 3 ಸ್ಟಂಪಿಂಗ್ ಮಾಡಿದ್ದಾರೆ. ಕೆಎಲ್ ರಾಹುಲ್ 9 ಕ್ಯಾಚ್ ಮತ್ತು 2 ಸ್ಟಂಪಿಂಗ್ ಮಾಡಿದ್ದಾರೆ. 9 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 378 ರನ್ ಗಳಿಸಿದ್ದಾರೆ.