ರಾಜ್ಕೋಟ್(ಗುಜರಾತ್): ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ದಾಖಲಿಸಿದರು. ಇದರಿಂದಾಗಿ ಆರಂಭಿಕ ಆಘಾತ ಅನುಭವಿಸಿದ್ದ ಟೀಂ ಇಂಡಿಯಾ ಚೇತರಿಸಿಕೊಳ್ಳುವುದರೊಂದಿಗೆ ಆಂಗ್ಲರ ವಿರುದ್ಧ ಹೋರಾಟ ಮುಂದುವರೆಸಿದೆ.
ಇಲ್ಲಿನ ಸೌರಾಷ್ಟ್ರ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇಂಗ್ಲೆಂಡ್ ತಂಡಕ್ಕೆ ಮರಳಿರುವ ಮಾರ್ಕ್ವುಡ್ ಟೀಂ ಇಂಡಿಯಾ ನಾಯಕನ ಈ ನಿರ್ಧಾರವನ್ನು ತಲೆಕೆಳಗಾಗುವಂತೆ ಮಾಡಿದರು. ಆರಂಭದಲ್ಲೇ ಅಗ್ರ ಕ್ರಮಾಂಕದ ಇಬ್ಬರು ಬ್ಯಾಟರ್ಗಳನ್ನು ವುಡ್ ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಕೇವಲ 10 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಶುಭಮನ್ ಗಿಲ್ ಶೂನ್ಯಕ್ಕೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ಮತ್ತೊಬ್ಬ ಯುವ ಬ್ಯಾಟರ್ ರಜತ್ ಪಾಟಿದಾರ್ ಸಹ 5 ರನ್ ಗಳಿಸಿ ಟಾಮ್ ಹಾರ್ಟ್ಲಿ ಬೌಲಿಂಗ್ನಲ್ಲಿ ಕ್ಯಾಚಿತ್ತರು. ಇದರಿಂದಾಗಿ 9 ಓವರ್ಗಳಲ್ಲಿ ಟೀಂ ಇಂಡಿಯಾ ಕೇವಲ 33 ರನ್ಗಳಿಗೆ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ರೋಹಿತ್-ಜಡೇಜಾ ಆಸರೆ: ತಂಡ ಸಂಕಟದ ಸಮಯದಲ್ಲಿದ್ದಾಗ ಜೊತೆಯಾದ ರೋಹಿತ್ ಶರ್ಮಾ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ನಾಲ್ಕನೇ ವಿಕೆಟ್ಗೆಜೊತೆಯಾಟ ನೀಡಿದ ಈ ಜೋಡಿ ಮೊದಲ ಸೆಷನ್ ಮುಗಿದು ಎರಡನೇ ಸೆಷನ್ ಆರಂಭವಾದ ಮೇಲೂ ಯಾವುದೇ ತಪ್ಪು ಮಾಡಲಿಲ್ಲ.
ರೋಹಿತ್ ಮತ್ತು ಜಡೇಜಾ ಅವರ ಸಾಂದರ್ಭೋಚಿತ ಆಟದಿಂದ ತಂಡದ ಮೊತ್ತವು 26 ಓವರ್‌ನಲ್ಲಿ 100 ರನ್ ಗಡಿ ದಾಟಿತು. ಅದರಲ್ಲೂ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಅವಕಾಶ ಸಿಕ್ಕಾಗಲೆಲ್ಲ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ರನ್ ಗಳಿಕೆಗೆ ಹೆಚ್ಚಿನ ವೇಗ ನೀಡಿದರು. ಮತ್ತೊಂದೆಡೆ, ಜಡೇಜಾ ಕೂಡ ನಾಯಕನಿಗೆ ಉತ್ತಮ ಸಾಥ್ ನೀಡುತ್ತಾ ಸ್ಕೋರ್ ಹೆಚ್ಚಿಸುವಲ್ಲಿ ನೆರವಾದರು.
11ನೇ ಶತಕ ಸಿಡಿಸಿದ ರೋಹಿತ್ ಶರ್ಮಾ: ತಮ್ಮ ಆಕರ್ಷಕ ಬ್ಯಾಟಿಂಗ್ನಿಂದ ರೋಹಿತ್ ಶರ್ಮಾ 11ನೇ ಶತಕ ಬಾರಿಸಿದರು. ಇದಕ್ಕಾಗಿ ಅವರು 157 ಎಸೆತಗಳನ್ನು ಎದುರಿಸಿದರು. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ಆರಂಭಿಕರಾಗಿ ಶತಕ ದಾಖಲಿಸಿದ ಆಟಗಾರರಲ್ಲಿ ರೋಹಿತ್ ಒಬ್ಬರು ಎಂಬ ಹೆಗ್ಗಳಿಕೆಗೂ ಪಾತ್ರರಾದರು. ದಿಗ್ಗಜ ಆಟಗಾರ ಸುನಿಲ್ ಗಾವಸ್ಕರ್ ಆರಂಭಿಕರಾಗಿ ಆಂಗ್ಲರ ವಿರುದ್ಧ ನಾಲ್ಕು ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಇವರ ನಂತರದಲ್ಲಿ ವಿಜಯ್ ಮರ್ಚೆಂಟ್, ಮುರಳಿ ವಿಜಯ್, ಕೆ.ಎಲ್.ರಾಹುಲ್ ಇದ್ದಾರೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ರೋಹಿತ್ ಶರ್ಮಾ.
ಸಿಕ್ಸರ್ನಲ್ಲೂ ರೋಹಿತ್ ದಾಖಲೆ: ಇದೇ ಪಂದ್ಯದಲ್ಲಿ ರೋಹಿತ್ ಎರಡನೇ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಇಂದಿನ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ಇವರ ಒಟ್ಟಾರೆ ಸಿಕ್ಸರ್ಗಳ ಸಂಖ್ಯೆ 79ಕ್ಕೆ ಏರಿಕೆಯಾಗಿದೆ.
ಭಾರತ ಪರ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಲ್ಲಿ ವಿರೇಂದ್ರ ಸೆಹ್ವಾಗ್ (90 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಎಂ.ಎಸ್.ಧೋನಿ 78 ಸಿಕ್ಸರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಇದೀಗ ಧೋನಿ ಅವರನ್ನು ರೋಹಿತ್ ಹಿಂದಿಕ್ಕಿದ್ದಾರೆ. ಮತ್ತೊಂದೆಡೆ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ (69), ರವೀಂದ್ರ ಜಡೇಜಾ (61), ಕಪಿಲ್ ದೇವ್ (61) ಹೆಚ್ಚಿನ ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ.
ಇದನ್ನೂ ಓದಿ: ಕೊನೆಗೂ 'ಟೆಸ್ಟ್' ಪಾಸ್ ಆದ ಸರ್ಫರಾಜ್; ಮೈದಾನದಲ್ಲಿ ಭಾವುಕ ಅಪ್ಪನಿಗೆ ಮಗನ ಅಪ್ಪುಗೆ