ಹೈದರಾಬಾದ್: ಸಾಧನೆಗೆ ಎಂದೂ ಕಷ್ಟಗಳು ಅಡ್ಡಿಯಾಗದು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ ಆಟಗಾರ್ತಿ ವೈಷ್ಣವಿ. ಆರ್ಥಿಕ ಮುಗ್ಗಟ್ಟಿನ ನಡುವೆ ತನ್ನ ಬದ್ಧತೆ ಮತ್ತು ಸಮರ್ಪಣಾ ಮನೋಭಾವದಿಂದ ಜಗತ್ತು ತಿರುಗು ನೋಡುವಂತೆ ಮಾಡಿದ್ದಾರೆ. ಇತ್ತೀಚಿಗೆ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪವರ್ ಲಿಫ್ಟಿಂಗ್ನಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ವೈಷ್ಣವಿ ಅವರ ಸ್ಪೂರ್ತಿದಾಯಕ ಪಯಣ ಇಲ್ಲಿದೆ.
ಬದ್ದತೆ ಮತ್ತು ಸಮರ್ಪಣೆ ಇದ್ದರೇ ಏನಾದರೂ ಸಾಧ್ಯ ಎಂಬುದನ್ನು ಅರಿತವರು ವೈಷ್ಣವಿ. ಸಾಧಾರಣ ಕುಟುಂಬದ ಹಿನ್ನೆಲೆಯಿಂದ ಬಂದ ಈ ಯುವ ಅಥ್ಲೀಟ್ ಕನಸು ನನಸು ಮಾಡುವ ಹಾದಿಯಲ್ಲಿ ಸಿಕ್ಕಿದ್ದು, ಅನೇಕ ಸವಾಲು, ಕಷ್ಟಗಳು. ಈ ನಡುವೆ ಆಕೆಗೆ ಬೆಂಬಲವಾಗಿದ್ದು ಕುಟುಂಬ ಮತ್ತು ಕೋಚ್. ಆಕೆಯ ಮೇಲೆ ಇವರಿಟ್ಟ ಭರವಸೆಯಿಂದಾಗಿ ಇದೀಗ ಆಕೆ ಪವರ್ ಲಿಫ್ಟಿಂಗ್ನಲ್ಲಿ ಮೇರು ಸಾಧನೆ ತೋರಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇದುವರೆಗೆ 40 ಪದಕಗಳನ್ನು ಜಯಿಸಿ ಇತರರಿಗೆ ಮಾದರಿಯಾಗಿದ್ದಾರೆ ವೈಷ್ಣವಿ.
ಮೆಕಾನಿಕ್ ಮಗಳ ಸಾಧನೆ: ಸಿಕಂದ್ರಬಾದ್ನ ಗೀತಾ ಮತ್ತು ರಾಮ್ ಮಹೇಶ್ ದಂಪತಿಯ ಮಗಳು ಈ ವೈಷ್ಣವಿ. ಮೆಕಾನಿಕ್ ಆಗಿ ಮಹೇಶ್ ಕಾರ್ಯ ನಿರ್ವಹಿಸುತ್ತಿದ್ದು, ವೈಷ್ಣವಿ ಸಹೋದರ ಬಿಟೆಕ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದಾರೆ. ಈ ನಡುವೆ ಕುಟುಂಬದ ಆರ್ಥಿಕ ಸಂಕಷ್ಟಗಳುಗಳು ಸಹ ಇವರನ್ನು ಕಂಗಾಲಾಗಿಸಿದ್ದು ಸುಳ್ಳಲ್ಲ. ಆದರೆ, ಕ್ರೀಡೆಯ ಬಗ್ಗೆ ವೈಷ್ಣವಿಗೆ ಇದ್ದ ಒಲವಿನಿಂದಾಗಿ ಇವು ಆಕೆಯ ಸಾಧನೆಗೆ ಅಡ್ಡಿಯಾಗಿಲ್ಲ. ಶೈಕ್ಷಣಿಕ ಸಾಧನೆ ಜೊತೆಗೆ ಅನೇಕ ಸ್ಪರ್ಧೆಗಳಲ್ಲಿ ಇವರು ಭಾಗಿಯಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ಪವರ್ ಲಿಫ್ಟಿಂಗ್ ಮಾತ್ರವೇ ವೈಷ್ಣವಿಗೆ ಮೆಚ್ಚಿನ ಕ್ರೀಡೆಯಲ್ಲ. ಇದರ ಹೊರತಾಗಿ ವೈಷ್ಣವಿ ಕಬ್ಬಡಿ, ವಾಲಿಬಾಲ್, ಖೋಖೋ, ಸಾಫ್ಟ್ಬಾಲ್ನಲ್ಲೂ ಮುಂದಿದ್ದು, ಕಾಲೇಜಿನಿಂದಲೂ ಆಕೆಗೆ ಪ್ರೋತ್ಸಾಹ ಸಿಕ್ಕಿದೆ. ಆರಂಭದಲ್ಲಿ ತಂಡದ ಆಟಗಳ ಬದಲಾಗಿ ಏಕ ಕ್ರೀಡೆಯಲ್ಲಿ ನೈಪುಣ್ಯತೆ ಪಡೆಯುವಂತೆ ವೈಷ್ಣವಿಗೆ ಸಲಹೆ ನೀಡಲಾಗಿತ್ತು. ಅದರಂತೆ ಅವರು, ಅತಿ ಹೆಚ್ಚಿನ ದೈಹಿಕ ಶ್ರಮ ಮತ್ತು ಶಿಸ್ತಿನ ಪವರ್ ಲಿಫ್ಟಿಂಗ್ ಆರಿಸಿಕೊಂಡರು.
ಫಲ ನೀಡಿದ ಶ್ರಮ: ನಿತ್ಯ ತಮ್ಮ ತರಬೇತಿಗೆ ಸಮಯ ಸಮರ್ಪಣೆ ಮಾಡಿದ ವೈಷ್ಣವಿ, ಇದಕ್ಕಾಗಿ ತೀವ್ರತರಹದ ಜಿಮ್ ಜೊತೆಗೆ ಕಾನ್ಸ್ಟೇಬಲ್ ಅಭ್ಯರ್ಥಿಗಳಿಗಾಗಿ ನೀಡುವ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಸೇರಿದರು. ಅವರ ಪರಿಶ್ರಮ ಫಲ ನೀಡಿತು. 2021ರಲ್ಲಿ ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಆಕೆಯ ಸಾಮರ್ಥ್ಯ ಗುರುತಿಸಿದ ಕೋಚ್ ಕೌಶಿಕ್ ಇವರಿಗೆ ಮಾರ್ಗದರ್ಶನ ಮಾಡಿದ್ದಾರೆ.
2022ರಲ್ಲಿ ವೈಷ್ಣವಿ ಕೇರಳದಲ್ಲಿ ನಡೆದ ಸಬ್ ಜೂನಿಯರ್ ಕ್ಲಾಸಿಕ್ನಲ್ಲಿ ಚಿನ್ನದ ಪದಕ ಮತ್ತು ಏಷ್ಯನ್ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಪಂಜಾಬ್ನಲ್ಲಿನ ರಾಷ್ಟ್ರ ಮಟ್ಟದ ಮತ್ತು ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದಲ್ಲಿ ಚಿನ್ನದ ಪದಕಗಳಿಸಿದ್ದಾರೆ. ಇವು ಅವರ ಕಾಮನ್ ವೆಲ್ತ್ ಗೇಮ್ಸ್ನ ಹಾದಿಗೆ ದಾರಿ ಮಾಡಿಕೊಟ್ಟಿವೆ.
ಸದ್ಯ ಕೌಶಿಕ್ ಅಡಿ ತರಬೇತಿ ಪಡೆಯುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಅವರಿಗೆ ಉಚಿತವಾಗಿ ಕೌಶಿಕ್ ಕೂಡ ತರಬೇತಿ ನೀಡುತ್ತಿದ್ದಾರೆ. ಆದರೆ, ಆಕೆಯ ಮುಂದಿನ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಇದಕ್ಕಾಗಿ ದಾನಿಗಳನ್ನು ಹುಡುಕುತ್ತಿದ್ದಾರೆ.
ವ್ಯಕ್ತಿಯೊಬ್ಬ ತನ್ನ ದೃಢತೆ ಮತ್ತು ಬದ್ಧತೆಯ ಜೊತೆಗೆ ತನ್ನ ನಂಬಿದವರ ಬೆಂಬಲದಿಂದ ಏನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ಚಿಕ್ಕ ವಯಸ್ಸಲ್ಲಿ ತಂದೆ-ತಾಯಿಯ ಸಾವು, ಹಲವು ರಾತ್ರಿಗಳ ಹಸಿವಿನ ನೋವು: ಇಂದು ಭಾರತ U19 ಕ್ರಿಕೆಟ್ ತಂಡದ ನಾಯಕ!