ಅಹಮದಾಬಾದ್: ಮಹತ್ವದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಿಗದಿತ 20 ಓವರ್ಗಳಲ್ಲಿ 173 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ತಂಡ ರನ್ ಗಳಿಸಲು ಪರದಾಡಿತು.
ಕಠಿಣ ಪಿಚ್ನಲ್ಲಿ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡ ಯಾವುದೇ ಹಂತದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಉತ್ತಮ ಆರಂಭದ ಸುಳಿವು ನೀಡಿದ ವಿರಾಟ್ ಮತ್ತು ಪ್ಲೆಸಿಸ್ 37 ರನ್ ಗಳಿಸುವಷ್ಟರಲ್ಲಿ ಬೇರ್ಪಟ್ಟರು. ಡು ಪ್ಲೆಸಿಸ್ 17 ರನ್ ಗಳಿಸಿದ್ದಾಗ, ಬೌಲ್ಟ್ ಎಸೆತದಲ್ಲಿ ಬಲವಾದ ಹೊಡೆತಕ್ಕೆ ಕೈಹಾಕಿ ವಿಕೆಟ್ ನೀಡಿದರು. ಬಳಿಕ ವಿರಾಟ್ ಕೊಹ್ಲಿ ಚಹಲ್ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿ ಬೌಂಡರಿ ಗೆರೆಯಲ್ಲಿ ಕ್ಯಾಚ್ ನೀಡಿದರು. ಅವರು 24 ಎಸೆತಗಳಲ್ಲಿ 33 ರನ್ ಗಳಿಸಿ ಆಡುತ್ತಿದ್ದರು.
ಬಳಿಕ ಕ್ಯಾಮರೂನ್ ಗ್ರೀನ್ ಮತ್ತು ರಜತ್ ಪಾಟೀದಾರ್ ಪಾಲುದಾರಿಕೆ ನೀಡಲು ಆರಂಭಿಸಿದರೂ, ಗ್ರೀನ್ 27 ರನ್ಗೆ ಆಶ್ವಿನ್ ಬೌಲಿಂಗ್ನಲ್ಲಿ ವಿಕೆಟ್ ನೀಡಿದರು. ಬಳಿಕ ತುಸು ಹೊತ್ತು ಅಬ್ಬರಿಸಿದ ಪಾಟೀದಾರ್ 34 ರನ್ಗೆ ಔಟಾದರು. ಇನ್ನೂ ಈ ಆವೃತ್ತಿಯಲ್ಲಿ ಭಾರೀ ವೈಫಲ್ಯ ಕಂಡಿರುವ ಗ್ಲೆನ್ ಮ್ಯಾಕ್ಸ್ವೆಲ್ ಮತ್ತೆ ನಿರಾಸೆ ಮೂಡಿಸಿ ಸೊನ್ನೆಗೆ ವಿಕೆಟ್ ನೀಡಿದರು. ಮಹಿಪಾಲ್ ಲೋಮ್ರೊರ್ 32, ದಿನೇಶ್ ಕಾರ್ತಿಕ್ 11, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸ್ವಪ್ನಿಲ್ ಸಿಂಗ್ 9, ಕರಣ್ ಶರ್ಮಾ 5 ರನ್ ಮಾಡಿದರು.
ಬಿಗಿ ಬೌಲಿಂಗ್ ದಾಳಿ: ರಾಜಸ್ಥಾನದ ಪರವಾಗಿ ಟ್ರೆಂಟ್ ಬೌಲ್ಟ್, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಿಗಿ ಬೌಲಿಂಗ್ ದಾಳಿ ನಡೆಸಿದರು. ಆವೇಶ್ ಖಾನ್ 3 ವಿಕೆಟ್ ಪಡೆದರೂ, 44 ರನ್ ಬಿಟ್ಟುಕೊಟ್ಟರು. ಬೌಲ್ಟ್, ಸಂದೀಪ್ ಶರ್ಮಾ, ಯಜುವೇಂದ್ರ ಚಹಲ್ ತಲಾ 1 ವಿಕೆಟ್ ಪಡೆದರು.
ಇನ್ನೂ, ಟಾಸ್ ಗೆದ್ದ ರಾಜಸ್ಥಾನ ಬೌಲಿಂಗ್ ಆಯ್ದುಕೊಂಡಿತು. ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ ಸೋಲು ಕಂಡಿತ್ತು. ಆರ್ಸಿಬಿಯನ್ನೂ ಮೊದಲು ಬ್ಯಾಟಿಂಗ್ಗೆ ಕಳುಹಿಸಿ ಅಲ್ಪಮೊತ್ತಕ್ಕೆ ಕಟ್ಟಿಹಾಕುವುದು ಆರ್ಆರ್ ನಾಯಕ ಸಂಜು ಸ್ಯಾಮ್ಸನ್ ತಂತ್ರವಾಗಿದೆ.
ತಂಡಗಳು ಇಂತಿವೆ; ರಾಯಲ್ ಚಾಲೆಂಜರ್ಸ್ ಬೆಂಗಳೂರು - ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮೊರೊರ್, ಕರಣ್ ಶರ್ಮಾ, ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಲೂಕಿ ಫರ್ಗುಸನ್.
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್ ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋಚ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯಜುವೇಂದ್ರ ಚಹಲ್.