ಬೆಂಗಳೂರು: 2024-25ರ ತನ್ನ ಅಭಿಯಾನಕ್ಕೂ ಮುನ್ನ ಆರು ಹೊಸ ಆಟಗಾರರನ್ನ ಬೆಂಗಳೂರು ಎಫ್‌ಸಿ ಬಹಿರಂಗಗೊಳಿಸಿದೆ. ಅಭಿಮಾನಿಗಳಿಗಾಗಿಯೇ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಅಬ್ಬರದ ಓಪನ್ ಕ್ಯಾಂಪ್ನಲ್ಲಿ ತನ್ನ ನೂತನ ಆಟಗಾರರನ್ನು ಬೆಂಗಳೂರು ಎಫ್‌ಸಿ ಪ್ರಕಟಿಸಿದೆ.
2023-24ನೇ ಇಂಡಿಯನ್ ಸೂಪರ್ ಲೀಗ್ ಋತುವಿನಲ್ಲಿ ಪ್ಲೇ ಆಫ್ ತಲುಪಲು ವಿಫಲವಾದ ಬೆಂಗಳೂರು ಎಫ್‌ಸಿ, ಮುಂದಿನ ಆವೃತ್ತಿಗಾಗಿ ತನ್ನ ಮಾಜಿ ಆಟಗಾರ ರಾಹುಲ್ ಭೆಕೆ, ಲಾಲ್ತುಮ್ಮಾವಿಯಾ ರಾಲ್ಟೆ, ಪಂಜಾಬ್ ಎಫ್‌ಸಿ ತಂಡದ ಮಾಜಿ ಆಟಗಾರ ಮೊಹಮ್ಮದ್ ಸಲಾಹ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅಲ್ಲದೆ ಸ್ಪ್ಯಾನಿಷ್ ಅಟ್ಯಾಕರ್ ಎಡ್ಗರ್ ಮೆಂಡೆಜ್, ಮಿಡ್ ಫೀಲ್ಡರ್ ಅಲ್ಬರ್ಟೋ ನುಗುಯೇರಾ ಹಾಗೂ ಅರ್ಜೆಂಟೀನಾದ ಸ್ಟ್ರೈಕರ್ ಜೋರ್ಜೆ ಪೆರೆಯ್ರಾ ಡಯಾಜ್ ಸೇರ್ಪಡೆಯನ್ನೂ ಕೂಡ ಇದೇ ಸಂದರ್ಭದಲ್ಲಿ ಪ್ರಕಟಿಸಲಾಗಿದೆ.
2018-19ರ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಪರ ಗೆಲುವಿನ ಗೋಲು ದಾಖಲಿಸಿದ್ದ ರಾಹುಲ್ ಭೆಕೆ, ನಂತರ ಮುಂಬೈ ಎಫ್‌ಸಿ ತಂಡ ಸೇರಿದ್ದರು. ರಾಹುಲ್ ನಾಯಕತ್ವದಲ್ಲಿ ಮುಂಬೈ ಎಫ್‌ಸಿ ತಂಡ 2023-24ರ ಐಎಸ್ಎಲ್ ಕಪ್ ಗೆದ್ದಿತ್ತು.
ಮೆಕ್ಸಿಕನ್ ಲಿಗಾ ಎಂಎಕ್ಸ್ನಲ್ಲಿ ಕ್ಲಬ್ ನೆಕಾಕ್ಸಾ ಪರ ಮಿಂಚಿರುವ ಎಡ್ಗರ್ ಮೆಂಡೆಜ್, ಅಲ್ಮೆರಿಯಾ, ಗ್ರಾನಡಾ ಮತ್ತು ಅಲಾವ್ಸ್‌ನಲ್ಲಿ 150 ಕ್ಕೂ ಹೆಚ್ಚು ಲಾ ಲಿಗಾ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಮೆಕ್ಸಿಕೋದ ಕ್ರೂಜ್ ಅಜುಲ್ ಕ್ಲಬ್‌ನೊಂದಿಗೆ 3 ವರ್ಷಗಳ ಅವಧಿಯನ್ನು ಹೊಂದಿದ್ದ ಮೆಂಡೆಜ್, 2018ರಲ್ಲಿ ಕೊಪಾ ಎಂಕ್ಸ್ ಅಪೆರ್ಚುರಾ, ಸೂಪರ್ ಕೊಪಾ ಎಂಎಕ್ಸ್, 2019ರಲ್ಲಿ ಲೀಗ್ಸ್ ಕಪ್ ಗೆಲ್ಲುವಲ್ಲಿ ಪಾತ್ರವಹಿಸಿದ್ದರು.
ಆಲ್ಬರ್ಟೊ ನೊಗುಯೇರಾ ಹಾಗೂ ಜೋರ್ಜೆ ಪೆರಯ್ರಾ ಡಯಾಜ್ ಅವರ ಆಕ್ರಮಣಕಾರಿ ಜೋಡಿ 2023-24ರ ಇಂಡಿಯನ್ ಸೂಪರ್ ಲೀಗ್ ಅಭಿಯಾನದಲ್ಲಿ ಮುಂಬೈ ಸಿಟಿ ಪರ ಮಿಂಚಿತ್ತು. ಸದ್ಯ ಇಬ್ಬರೂ ಆಟಗಾರರು ಭಾರತಕ್ಕೆ ಪ್ರಯಾಣಿಸಲು ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಲಾಯಿತು.
ಬೆಂಗಳೂರು ಎಫ್‌ಸಿಗೆ ಮರಳಿದ ಕುರಿತು ಸಂತಸ ವ್ಯಕ್ತಪಡಿಸಿದ ರಾಹುಲ್ ಭೆಕೆ, "ಇದು ನನಗೆ ಅತ್ಯುತ್ತಮ ಭಾವನೆ. ಇಲ್ಲಿರುವವರು ದೇಶದ ಅತ್ಯುತ್ತಮ ಅಭಿಮಾನಿಗಳು ಎಂದು ನಾನು ಮೊದಲೇ ಹೇಳಿದ್ದೇನೆ. ಅವರ ಮುಂದೆ ಹಿಂತಿರುಗಲು ಮತ್ತು ಬೆಂಗಳೂರು ಎಫ್‌ಸಿಯನ್ನು ಪ್ರತಿನಿಧಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಬೆಂಗಳೂರು ಎಫ್‌ಸಿ ಜೊತೆಗಿನ ನನ್ನ ಹಿಂದಿನ ಅವಧಿಯಲ್ಲಿ ಉತ್ತಮ ನೆನಪುಗಳನ್ನು ಹೊಂದಿದ್ದೇನೆ ಮತ್ತು ಅಂತಹ ಹೆಚ್ಚು ಕ್ಷಣಗಳನ್ನ ನಾನು ಎದುರು ನೋಡುತ್ತಿದ್ದೇನೆ'' ಎಂದರು.
''ಬೆಂಗಳೂರಿಗೆ ಹಿಂತಿರುಗಿದ್ದು ಮತ್ತು ಇಂದು ನಮ್ಮ ಅಭಿಮಾನಿಗಳ ಮುಂದೆ ತರಬೇತಿ ಶಿಬಿರ ಆರಂಭಿಸುತ್ತಿರುವುದಕ್ಕೆ ಸಂತಸವಿದೆ. ಈ ಋತುವಿಗಾಗಿ ನಾವು ಉತ್ತಮ ತಂಡವನ್ನ ಒಟ್ಟುಗೂಡಿಸಿದ್ದೇವೆ ಎಂದು ನಾನು ನಂಬುತ್ತೇನೆ. ಮತ್ತು ಎಲ್ಲಾ ಸವಾಲುಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ. ನಮ್ಮ ಅಭಿಮಾನಿಗಳಿಗೆ ನಮ್ಮ ಮೇಲಿರುವ ಪ್ರೀತಿ, ನಂಬಿಕೆಯನ್ನ ನಾವು ಮರಳಿ ನೀಡಲು ಬಯಸುತ್ತೇವೆ'' ಎಂದು ಬೆಂಗಳೂರು ಎಫ್‌ಸಿ ತಂಡದ ಕೋಚ್ ಗೆರಾಲ್ಡ್ ಜರಗೋಜಾ ತಿಳಿಸಿದರು.
ಬೆಂಗಳೂರು ಎಫ್‌ಸಿ ತಂಡ ಮುಂದಿನ ತಿಂಗಳಿನಿಂದ ಕೊಲ್ಕತ್ತಾದಲ್ಲಿ ಆರಂಭವಾಗಲಿರುವ ಡುರಾಂಡ್ ಕಪ್ ಮೂಲಕ ತನ್ನ 2024-25ನೇ ಫುಟ್‌ಬಾಲ್ ಋತುವನ್ನು ಆರಂಭಿಸಲಿದೆ.
ಇದನ್ನೂ ಓದಿ: 'ಭಾರತ ರತ್ನ' ರಾಹುಲ್ ದ್ರಾವಿಡ್, ಇದು ಕೇಳಲು ಎಷ್ಟು ಸೊಗಸಾಗಿದೆ ಅಲ್ವೇ?: ಸುನಿಲ್ ಗವಾಸ್ಕರ್ - Sunil Gavaskar