ಹೈದರಾಬಾದ್ (ತೆಲಂಗಾಣ): ಇಂದು ಇಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 69ನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ನಾಲ್ಕು ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸುವ ಮೂಲಕ 17 ಅಂಕಗಳೊಂದಿಗೆ ಪ್ಲೇಆಫ್ನ ಎರಡನೇ ಸ್ಥಾನಕ್ಕೇರಿದೆ.
215 ರನ್‌ಗಳ ಗುರಿ ನೀಡಿದ್ದ ಪಂಜಾಬ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಉತ್ತಮ ಆರಂಭ ಪಡಿದುಕೊಂಡಿತು. ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಪಂಜಾಬ್ ಪರ ಪ್ರಭಾಸಿಮ್ರಾನ್ ಸಿಂಗ್ ಅತಿ ಹೆಚ್ಚು ರನ್ ಗಳಿಸಿದರು. ಅವರು ಕೇವಲ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 71 ರನ್ ಗಳಿಸಿದರು.
ರಿಲೆ ರಿಸೌವ್ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 49 ರನ್ ಗಳಿಸಿದ್ರೆ, ಅಥರ್ವ ತಾಯ್ಡೆ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 46 ರನ್ ಗಳಿಸಿದರು. ಆದರೆ ಜಿತೇಶ್ ಶರ್ಮಾ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 15 ರನ್ ಗಳಿಸಿದರು. ಈ ಪಂದ್ಯದಲ್ಲಿ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ತಲಾ 2 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಸನ್ ರೈಸರ್ಸ್ ಹೈದರಾಬಾದ್ ಪರ ನಟರಾಜನ್ 2 ವಿಕೆಟ್ ಪಡೆದ್ರೆ, ನಾಯಕ ಕಮ್ಮಿನ್ಸ್ ಮತ್ತು ಶಹಬಾಜ್ ಅಹಮದ್ ತಲಾ ಒಂದೊಂದು ವಿಕೆಟ್ ಪಡೆದರು.
ರಾಯಲ್ ಡಕ್ ಔಟ್ ಆದ ಹೆಡ್: ಪಂಜಾಬ್ ಕಿಂಗ್ಸ್ ನೀಡಿದ 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್‌ಗೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದರು. ಪಂಜಾಬ್ ಕಿಂಗ್ಸ್ನ ವೇಗಿ ಮತ್ತು ಭರವಸೆ ಬೌಲರ್ ಆಗಿರುವ ಅರ್ಷ್‌ದೀಪ್ ಸಿಂಗ್ ಬೌಲ್ ಮಾಡಿದ ಮೊದಲ ಓವರ್‌ನ ಮೊದಲ ಬಾಲ್ನಲ್ಲಿ ಟ್ರಾವಿಸ್ ಹೆಡ್‌ನ ವಿಕೆಟ್ ಕಬಳಿಸಿದರು. ಈ ಮೂಲಕ ಅವರು ರಾಯಲ್ ಡಕ್ಔಟ್ ಆಗಿ ಪೆವಿಲಿಯನ್ ಸೇರಿದರು.
ರಾಯಲ್ ಡಕ್ ಔಟ್ ಎಂದರೇನು?: ರಾಯಲ್ ಡಕ್ಔಟ್ ಎಂದ್ರೆ ಇನಿಂಗ್ಸ್ನ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಖಾತೆ ತೆರೆಯದೇ ಔಟ್ ಆಗುವುದನ್ನು ರಾಯಲ್ ಅಥವಾ ಪ್ಲಾಟಿನಂ ಡಕ್ ಎನ್ನುತ್ತೇವೆ.
ಇನ್ನು ಹೆಡ್ ಬಳಿಕ ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ರಾಹುಲ್ ತ್ರಿಪಾಠಿ (33) ಔಟಾಗುವ ಮೂಲಕ ಹೈದರಾಬಾದ್‌ಗೆ ಕೊಂಚ ಹೊಡೆತ ಬಿದ್ದಂತೆ ಕಾಣಿಸಿಕೊಂಡಿತ್ತು. ಆದ್ರೂ ಸಹ ಅಭಿಷೇಕ್ ಶರ್ಮಾ ಪಂಜಾಬ್ ಬೌಲರ್ಗಳನ್ನು ಸಖತ್ ಆಗಿ ಬೆಂಡೆತ್ತಿದರು. ಬಳಿಕ ಅಭಿಷೇಕ್ ಜೊತೆಗೂಡಿದ ನಿತೀಶ್ ರೆಡ್ಡಿ ಸಹ ಆಲ್ರೌಂಡರ್ ಆಟ ಪ್ರದರ್ಶಿಸುತ್ತಿದ್ದರು. 28 ಎಸೆತಗಳಲ್ಲಿ 66 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಶಶಾಂಕ್ ಸಿಂಗ್ ಬೌಲಿಂಗ್ನಲ್ಲಿ ಔಟಾದರು. ಇವರ ಬಳಿಕ ಬಂದ ಕೀಪರ್ ಹೆನ್ರಿಕ್ ಕ್ಲಾಸೆನ್ ಹಾಗೂ ನಿತೀಶ್ ರೆಡ್ಡಿ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
37 ರನ್ಗಳನ್ನು ಕಲೆ ಹಾಕಿ ಉತ್ತಮವಾಗಿಯೇ ಬ್ಯಾಟ್ ಬೀಸುತ್ತಿದ್ದ ನಿತೀಶ್ ರೆಡ್ಡಿ, ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ಔಟಾದರು. ಒಂದು ಕಡೆಯಿಂದ ಕ್ಲಾಸೆನ್ (42 ರನ್) ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಯತ್ನಿಸುತ್ತಿದ್ರೆ ಮೊತ್ತೊಂದು ಕಡೆಯಿಂದ ಪಂಜಾಬ್ ಈ ಪಂದ್ಯ ಗೆಲ್ಲಲ್ಲು ತೀವ್ರ ಪೈಪೋಟಿವೊಡ್ಡುತ್ತಿತ್ತು. ಕೊನೆಯ ಓವರ್ವರೆಗೂ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸನ್‌ರೈಸರ್ಸ್ ಗೆದ್ದು ಬೀಗಿತು. ಹೈದರಾಬಾದ್ ತಂಡ 19.1 ಓವರ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು 215 ರನ್ಗಳನ್ನು ಕಲೆ ಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯ ಗೆಲುವಿನ ಮೂಲಕ ಹೈದರಾಬಾದ್ ತಂಡ 17 ಅಂಕ ಪಡೆಯುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 2 ಸ್ಥಾನಕ್ಕೇರಿದೆ. ಇನ್ನು ಕೋಲ್ಕತ್ತಾ ಮತ್ತು ರಾಜಸ್ಥಾನ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಪ್ಲೇಆಫ್ನ ಎರಡನೇ ಸ್ಥಾನ ತೀರ್ಮಾನಗೊಳ್ಳಲಿದೆ.