ಫ್ಲೋರಿಡಾ (ಯುಎಸ್ಎ): ಇಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಶುಕ್ರವಾರ ಐರ್ಲೆಂಡ್ ವಿರುದ್ಧ ನಡೆಯಬೇಕಿದ್ದ ಪಂದ್ಯವು ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಅಮೆರಿಕ ತಂಡವು ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತಕ್ಕೆ ತಲುಪಿದೆ. ಇದರಿಂದಾಗಿ, 2009ರ ಚಾಂಪಿಯನ್ ಪಾಕಿಸ್ತಾನ ಚುಟುಕು ಕ್ರಿಕೆಟ್ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಅಲ್ಲದೇ, ಈ ಸಾಧನೆಯೊಂದಿಗೆ ಅಮೆರಿಕ ತಂಡವು, 2026ರ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆವೃತ್ತಿಗೆ ನೇರ ಅರ್ಹತೆ ಪಡೆದುಕೊಂಡಿದೆ. ಐಸಿಸಿ ಪ್ರಕಾರ, ಟಾಪ್ 8ರಲ್ಲಿ ಸ್ಥಾನ ಪಡೆದ ತಂಡಗಳು ಮುಂದಿನ ಟೂರ್ನಿಗೆ ನೇರವಾಗಿ ಎಂಟ್ರಿ ಕೊಡಲಿವೆ.
ಶುಕ್ರವಾರ ಫ್ಲೋರಿಡಾದಲ್ಲಿನ ಐರ್ಲೆಂಡ್ ಹಾಗೂ ಅಮೆರಿಕ ನಡುವಿನ ಪಂದ್ಯಕ್ಕೆ ಭಾರಿ ಮಳೆಯಿಂದಾಗಿ ಟಾಸ್ ಕೂಡ ನಡೆಯಲಿಲ್ಲ. ಹೀಗಾಗಿ, ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಇನ್ನೊಂದೆಡೆ, ಅಮೆರಿಕ ಸೋತರೆ ಮಾತ್ರ ಮುಂದಿನ ಹಂತಕ್ಕೆ ಪ್ರವೇಶಿಸುವ ಪಾಕಿಸ್ತಾನ ತಂಡಕ್ಕೆ ಮಳೆ ಆಘಾತ ನೀಡಿತು. ಎ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎರಡು ಗೆಲುವಿನೊಂದಿಗೆ 5 ಅಂಕ ಹೊಂದಿರುವ ಯುಎಸ್ ಸೂಪರ್-8ಕ್ಕೆ ತಲುಪಿತು.
ಪಾಕ್ ತಂಡ ನಿರ್ಗಮನ: ಮೂರು ಪಂದ್ಯಗಳಲ್ಲಿ 2ನ್ನು ಸೋತ ಪಾಕಿಸ್ತಾನ ಐರ್ಲೆಂಡ್ ವಿರುದ್ಧದ ಹಣಾಹಣಿಗೂ ಮುನ್ನವೇ ಟೂರ್ನಿಯಲ್ಲಿ ಮುಂದಿನ ಹಂತಕ್ಕೇರುವ ಅವಕಾಶ ಕಳೆದುಕೊಂಡಿದೆ. ಯುಎಸ್ ವಿರುದ್ಧದ ಮೊದಲ ಪಂದ್ಯವನ್ನು ಸೋತಾಗಲೇ ಪಾಕಿಸ್ತಾನಕ್ಕೆ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗುವ ಅನಿವಾರ್ಯತೆ ಎದುರಾಗಿತ್ತು. ಬಳಿಕ ಭಾರತದ ವಿರುದ್ಧವೂ ಸೋತಿತ್ತು. ನಂತರ ಕೆನಡಾ ಮಣಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಕಂಡಿತ್ತು.
ಇದನ್ನೂ ಓದಿ: ಸೂಪರ್ -8ರ ಸುತ್ತಿಗೆ ಆರ್ಹತೆ ಪಡೆದ ಆಫ್ಘನ್: ಸೋಲಿನೊಂದಿಗೆ ಪಪುವಾ ನ್ಯೂಗಿನಿಯಾ ಟೂರ್ನಿನಿಂದ ಔಟ್! - T20 World Cup
ಗ್ರೂಪ್ ಹಂತದಲ್ಲಿನ ಹೀನಾಯ ಪ್ರದರ್ಶನಕ್ಕೆ ಪಾಕ್ ತಂಡದ ವಿರುದ್ಧ ಅಲ್ಲಿನ ಮಾಜಿ ಆಟಗಾರರು ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ಕಮ್ರಾನ್ ಅಕ್ಮಲ್, ಮೊಹಮದ್ ಹಫೀಜ್ ಸೇರಿದಂತೆ ಹಲವರು ಬಾಬರ್ ಅಜಮ್ ಪಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
2009ರಲ್ಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನ, ಈ ಹಿಂದೆ 2014 ಮತ್ತು 2016ರಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಆ ಬಳಿಕ ಹಲವು ಬಾರಿ ಸೆಮಿಫೈನಲ್ ತಲುಪಿತ್ತು. 2022ರ ಆವೃತ್ತಿಯಲ್ಲೂ ಕೂಡ ಜಿಂಬಾಬ್ವೆ ವಿರುದ್ಧ ಸೋತು ಟೂರ್ನಿಯಿಂದ ಹೊರಬೀಳುವ ಭೀತಿ ಎದುರಿಸಿದ್ದ ಪಾಕ್ ಬಳಿಕ ಪುಟಿದೆದ್ದು, ಫೈನಲ್ ತಲುಪಿತ್ತು. ಆದರೆ, ಅಂತಿಮ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು. ಈಗಾಗಲೇ ಪ್ರಮುಖ ತಂಡಗಳಾದ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಕೂಡ ಕಳಪೆ ಪ್ರದರ್ಶನದಿಂದ ಟೂರ್ನಿಯ ಸೂಪರ್-8 ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿವೆ.