ನವದೆಹಲಿ: ಅಪ್ಘಾನಿಸ್ತಾನದಲ್ಲಿ ಭದ್ರತಾ ಸಮಸ್ಯೆ ತಲೆದೋರಿದ ಕಾರಣ ನ್ಯೂಜಿಲ್ಯಾಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಆತಿಥ್ಯ ವಹಿಸುತ್ತಿದೆ. ಆಫ್ಘನ್ ಕ್ರಿಕೆಟ್ ಮಂಡಳಿ ಕೋರಿಕೆಯ ಮೇರೆಗೆ ಬಿಸಿಸಿಐ ಮತ್ತು ಭಾರತ ಸರ್ಕಾರ ಸರಣಿಯನ್ನು ಆಡಿಸಲು ಒಪ್ಪಿದೆ.
ಸೆಪ್ಟೆಂಬರ್ 9 ರಿಂದ 13 ರವರೆಗೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವೆ ಏಕೈಕ ಟೆಸ್ಟ್ ಪಂದ್ಯದ ಸರಣಿ ನಡೆಯಲಿದೆ. ಸದ್ಯ ಅಪ್ಘನ್ನಲ್ಲಿ ಪರಿಸ್ಥಿತಿ ನಿಚ್ಚಳವಾಗಿಲ್ಲದ ಕಾರಣ, ಕಿವೀಸ್ ಅಲ್ಲಿಗೆ ತೆರಳಲು ಹಿಂದೇಟು ಹಾಕಿದೆ. ಹೀಗಾಗಿ ಪಂದ್ಯವನ್ನು ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಪಂದ್ಯವು ನೋಯ್ಡಾದ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಜರುಗಲಿದೆ.
ಇತ್ತಂಡಗಳಿಗೆ ಅದ್ಧೂರಿ ಸ್ವಾಗತ: ಎರಡೂ ರಾಷ್ಟ್ರಗಳ ನಡುವಿನ ಟೆಸ್ಟ್ ಸರಣಿಗೆ ಭಾರತದ ಕ್ರೀಡಾಂಗಣ ಆತಿಥ್ಯ ವಹಿಸಿದ್ದರಿಂದ, ಇತ್ತಂಡಗಳ ಆಟಗಾರರು ಇಲ್ಲಿಗೆ ಬಂದಿಳಿದಿದ್ದಾರೆ. ಅಫ್ಘಾನಿಸ್ತಾನ ತಂಡ ಆಗಸ್ಟ್ 28 ರಂದು ಭಾರತಕ್ಕೆ ಬಂದಿದೆ. ನ್ಯೂಜಿಲ್ಯಾಂಡ್ ತಂಡ ಸೆಪ್ಟೆಂಬರ್ 5 ರಂದು ಬಂದಿಳಿಯಿತು. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಟಗಾರರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಬರಮಾಡಿಕೊಳ್ಳಲಾಯಿತು.
ಅಫ್ಘಾನಿಸ್ತಾನ ತನ್ನ ಸರಣಿಗಳನ್ನು ಭಾರತದಲ್ಲಿ ಆಡುತ್ತಿರುವುದು ಇದೇ ಮೊದಲಲ್ಲ. 2018 ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಬೆಂಗಳೂರಿನಲ್ಲಿ, 2019 ರಲ್ಲಿ ಐರ್ಲೆಂಡ್‌ಗೆ ವಿರುದ್ಧದ ಪಂದ್ಯಕ್ಕೆ ಆತಿಥ್ಯ ವಹಿಸಿತ್ತು. ಭಾರತದ ವಿರುದ್ಧ ಅಫ್ಘಾನಿಸ್ತಾನ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿತ್ತು. ಅದಾದ ಬಳಿಕ ಇದುವರೆಗೆ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅದರಲ್ಲಿ 3 ಪಂದ್ಯಗಳನ್ನು ಭಾರತದಲ್ಲೇ ಆಡಿದೆ ಎಂಬುದು ವಿಶೇಷ.
ರಶೀದ್ ಖಾನ್ಗೆ ವಿಶ್ರಾಂತಿ: ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ನ್ಯೂಜಿಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ವೈದ್ಯರು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಸರಣಿಯಲ್ಲಿ ಆಡುತ್ತಿಲ್ಲ. ನವೆಂಬರ್‌ನಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಂತರ, ರಶೀದ್ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 4 ತಿಂಗಳ ಕಾಲ ಮೈದಾನದಿಂದ ಹೊರಗುಳಿದಿದ್ದರು. ಬಳಿಕ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ತಂಡದ ನಾಯಕತ್ವ ವಹಿಸಿ, ಸೆಮಿಫೈನಲ್‌ಗೆ ಕೊಂಡೊಯ್ದು ಇತಿಹಾಸ ಸೃಷ್ಟಿಸಿದರು.
ಇತರ ರಾಷ್ಟ್ರಗಳಿಗೂ ನೆರವು: ಭಾರತ ಮತ್ತು ಬಿಸಿಸಿಐ ಅಫ್ಘಾನಿಸ್ತಾನ ಮಾತ್ರವಲ್ಲ ನೆರೆಯ ರಾಷ್ಟ್ರಗಳಾದ ನೇಪಾಳ ಮತ್ತು ಬಾಂಗ್ಲಾದೇಶಕ್ಕೂ ನೆರವು ನೀಡಿದೆ. ನೇಪಾಳ ಕ್ರಿಕೆಟ್ ತಂಡವು ಪಂದ್ಯಗಳನ್ನು ಆಡಲು ಭಾರತದ ನೆಲವನ್ನು ಹಲವು ಬಾರಿ ಆಯ್ಕೆ ಮಾಡಿಕೊಂಡಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಆ ತಂಡದ ಆಟಗಾರರು ಅಭ್ಯಾಸ ಮಾಡಿದ್ದರು. ಬಾಂಗ್ಲಾದೇಶದಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ಅಲ್ಲಿನ ಕ್ರಿಕೆಟ್ ಅನ್ನು ಉತ್ತೇಜಿಸಲು ಬಿಸಿಸಿಐ ಸಹಾಯ ಮಾಡಿದೆ.