ಮುಂಬೈ(ಮಹಾರಾಷ್ಟ್ರ): ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಅವರೊಂದಿಗಿನ ಸಂಬಂಧ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಮುಂಬೈನಲ್ಲಿ ನಡೆದ ಮಾಧ್ಯಗೋಷ್ಠಿಯಲ್ಲಿ ರನ್ ಮಷಿನ್ ಜೊತೆಗಿನ ಸಂಬಂಧದ ಕುರಿತು ಪ್ರತಿಕ್ರಿಯಿಸಿದ ಅವರು, "ವಿರಾಟ್ ಕೊಹ್ಲಿ ಅವರೊಂದಿಗಿನ ನನ್ನ ಸಂಬಂಧವು ನಮ್ಮಿಬ್ಬರ ನಡುವೆ ಇದೆಯೇ ಹೊರತು, ಟಿಆರ್‌ಪಿಗಾಗಿಯಲ್ಲ. ಮುಂದಿನ ದಿನಗಳಲ್ಲಿ ನಾವಿಬ್ಬರೂ ಒಂದೇ ಪುಟದಲ್ಲಿರುತ್ತೇವೆ" ಎಂದು ಹೇಳಿದ್ದಾರೆ.
ನಾನು ಮೈದಾನದ ಹೊರಗೆ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನಾನು ಅವನೊಂದಿಗೆ ಸಾಕಷ್ಟು ಚಾಟ್ ಮಾಡಿದ್ದೇನೆ. ನಾವು ಪರಸ್ಪರ ಸಂದೇಶಗಳನ್ನು ಹಂಚಿಕೊಳ್ಳುತ್ತೇವೆ. ಇದೀಗ ಅತ್ಯಂತ ಮುಖ್ಯವಾದ ವಿಷಯ ಎಂದರೆ ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸುವುದು. ವಿರಾಟ್ ಕೊಹ್ಲಿ ವಿಶ್ವ ದರ್ಜೆಯ ಆಟಗಾರ. ವೃತ್ತಿಪರ ಕ್ರಿಕೆಟರ್ ಆಗಿರುವ ವಿರಾಟ್ ಕೊಹ್ಲಿಯನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.
ವೈಟ್ ಬಾಲ್ ಸರಣಿಗೆ ತಂಡದ ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಲೆ ಮತ್ತು ಭಾರತದ ಮಾಜಿ ಆಲ್ ರೌಂಡರ್ ಅಭಿಷೇಕ್ ನಾಯರ್ ಅವರು ಸಹಾಯಕ ಕೋಚ್ ಆಗಿ ತಂಡದೊಂದಿಗೆ ಬರುತ್ತಿದ್ದಾರೆ ಎಂದು ಗಂಭೀರ್ ಮಾಹಿತಿ ನೀಡಿದ್ದಾರೆ.
ನಾನು ಹಲವು ಬಾರಿ ಹೇಳಿದ್ದೇನೆ, ಪ್ರತಿಯೊಬ್ಬರಿಗೂ ತಮ್ಮದೇ ತಂಡಕ್ಕಾಗಿ, ತಮ್ಮ ಸ್ವಂತ ಜರ್ಸಿಗಾಗಿ ಆಟ ಆಡುವ ಹಕ್ಕಿದೆ ಮತ್ತು ಗೆಲುವಿನೊಂದಿಗೆ ಡ್ರೆಸ್ಸಿಂಗ್ ರೂಮ್‌ಗೆ ಮರಳಲು ಬಯಸುತ್ತಾರೆ ಎಂದು ಆಯ್ಕೆದಾರರ ಅಧ್ಯಕ್ಷ ಅಜಿತ್ ಅಗರ್ಕರ್ ತಿಳಿಸಿದ್ದಾರೆ.
ಐಪಿಎಲ್ ಕ್ರೀಡಾಕೂಟದಲ್ಲಿ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿರುವುದರಿಂದ, ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧ ಅಷ್ಟು ಸರಿಯಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ, ಈ ಇಬ್ಬರು ಜುಲೈ 27ರಿಂದ ಪ್ರಾರಂಭವಾಗಲಿರುವ ಶ್ರೀಲಂಕಾ ಪ್ರವಾಸದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಜುಲೈ 27ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವು, ಶ್ರೀಲಂಕಾ ತಂಡದೆದುರು ಮೂರು ಏಕದಿನ ಪಂದ್ಯ ಹಾಗೂ ಅಷ್ಟೇ ಸಂಖ್ಯೆಯ ಟಿ-20 ಪಂದ್ಯಗಳನ್ನಾಡಲಿದೆ.
ಇದನ್ನೂ ಓದಿ: IPL: ಮುಂಬೈನಿಂದ ಈ ತಾರೆಯರು ದೂರ! 4 ತಂಡಗಳ ನಾಯಕರು ಬದಲು?; RCBಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್? - IPL 2025 Mega Auction