ಪ್ಯಾರಿಸ್ (ಫ್ರಾನ್ಸ್): ಹ್ಯಾಟ್ರಿಕ್ ಪದಕ ನಿರೀಕ್ಷೆಯಲ್ಲಿದ್ದ ಭಾರತದ ಸ್ಟಾರ್ ಶೂಟರ್ ಮನು ಭಾಕರ್ಗೆ ನಿರಾಸೆಯಾಗಿದೆ. ಇಂದು ನಡೆದ ಪ್ಯಾರಿಸ್ ಒಲಿಂಪಿಕ್ನ 25ಮೀ. ಮಹಿಳೆಯರ ಪಿಸ್ತೂಲ್ ಸ್ಫರ್ಧೆಯಲ್ಲಿ, 3/4ನೇ ಸ್ಥಾನದ ಎಲಿಮಿನೇಷನ್ ಶೂಟ್ - ಆಫ್‌ನಲ್ಲಿ ಎಲಿಮಿನೇಟ್ ಆಗಿದ್ದಾರೆ. ಇದರೊಂದಿಗೆ ನಾಲ್ಕನೇ ಸ್ಥಾನ ಪಡೆದ ಮನು ಅವರ ಒಲಿಂಪಿಕ್ ಅಭಿಯಾನ ಕೊನೆಗೊಂಡಿದೆ.
ಒಂದು ವೇಳೆ ಈ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದರೆ ಒಂದೇ ಒಲಿಂಪಿಕ್ನಲ್ಲಿ 3 ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಳ್ಳುತ್ತಿದ್ದರು. ಆದಾಗ್ಯೂ, ಪ್ಯಾರಿಸ್‌ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಸಿಂಗಲ್ಸ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಮನು ಭಾಕರ್ ಈಗಾಗಲೇ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಸುತ್ತಿನ ನಂತರ ಎರಡನೇ ಸ್ಥಾನದಲ್ಲಿದ್ದ ಮನು ನಂತರ 7 ಸುತ್ತು ಅಂತ್ಯದವರೆಗೂ ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲುವ ತವಕದಲ್ಲಿದ್ದರು. ಆದರೆ 8ನೇ ಸುತ್ತಿನಲ್ಲಿ ತನ್ನ 5 ಹೊಡೆತಗಳಲ್ಲಿ ಎರಡರಲ್ಲಿ ಯಶಸ್ಸು ಸಾಧಿಸಿದ ಕಾರಣ 3ನೇ ಸ್ಥಾನದಲ್ಲಿ ಉಳಿಯಲು ಶೂಟ್-ಆಫ್ ಸ್ಪರ್ಧೆ ಏರ್ಪಟ್ಟಿತ್ತು. ಆದ್ರೆ ಈ ಇದರಲ್ಲಿ ಹಂಗೇರಿಯ ಶೂಟರ್ ವೆರೋನಿಕಾ ಮೇಜರ್ ಮನು ಅವರನ್ನು ಹಿಂದಿಕ್ಕಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಇದೇ ಸ್ಪರ್ಧೆಯ ಫೈನಲ್‌ನಲ್ಲಿ ಕೊರಿಯಾದ ಯಾಂಗ್ ಜಿನ್ 37 ಅಂಕ ಗಳಿಸಿ ಚಿನ್ನದ ಪದಕ ಗೆದ್ದರು. ಅದೇ ಸಮಯದಲ್ಲಿ, ಆತಿಥೇಯ ಫ್ರಾನ್ಸ್‌ನ ಶೂಟರ್ ಕ್ಯಾಮಿಲ್ಲೆ ಜೆಡ್ರೆಜೆವ್ಸ್ಕಿ 10ನೇ ಸುತ್ತಿನ ಬಳಿಕ ಶೂಟ್-ಆಫ್‌ನಲ್ಲಿ ಸ್ಫರ್ಧಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಇದನ್ನೂ ಓದಿ: ಒಲಿಂಪಿಕ್ಸ್ ಡಬಲ್ ಪದಕ ವಿಜೇತೆ ಮನು ಭಾಕರ್ ಬ್ರ್ಯಾಂಡ್ ಮೌಲ್ಯ 6 ಪಟ್ಟು ಹೆಚ್ಚಳ! - Manu Bhaker