ಕೋಲ್ಕತ್ತಾ: ಗೆಲ್ಲಬೇಕು ಎಂಬ ಹಠವಿದ್ದರೆ ಯಶಸ್ಸು ಖಂಡಿತ ಎಂಬುದನ್ನು ರಾಜಸ್ಥಾನ ರಾಯಲ್ಸ್ ತಂಡ ಸಾಬೀತುಪಡಿಸಿತು. ಇನ್ನೇನು ತಂಡ ಸೋಲುತ್ತದೆ ಎಂದುಕೊಂಡಿದ್ದ ಅಭಿಮಾನಿಗಳಲ್ಲಿ ಜೋಸ್ ಬಟ್ಲರ್ ಎಂಬ ದೈತ್ಯ ದಾಂಡಿಗನ ಅಬ್ಬರದ ಬ್ಯಾಟಿಂಗ್ ಗೆಲುವಿನ ಅಲೆ ಎಬ್ಬಿಸಿತು.
ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ವಿರುದ್ಧ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಕೆಕೆಆರ್ ನೀಡಿದ್ದ 223 ರನ್ಗಳ ಕಠಿಣ ಮೊತ್ತವನ್ನು ಕೊನೆಯ ಎಸೆತದಲ್ಲಿ ದಾಟಿತು. 8 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿ ವಿಜಯದ ನಗೆ ಬೀರಿತು. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಜೋಸ್ ಬಟ್ಲರ್ ಅವರ ಭರ್ಜರಿ ಶತಕ.
ಸತತ ವಿಕೆಟ್ ಬೀಳುತ್ತಿದ್ದರೂ, ಪಿಚ್ಗೆ ಅಂಟಿಕೊಂಡು ಆಡಿದ ಬಟ್ಲರ್ ಕೊನೆಯ ಎಸೆತದವರೆಗೂ ಬ್ಯಾಟ್ ಮಾಡಿ ತಂಡವನ್ನು ಜಯದ ದಡ ಸೇರಿಸಿದರು. ಕೊನೆಯ ಓವರ್ನಲ್ಲಿ 9 ರನ್ ಬೇಕಿದ್ದಾಗ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದರು. ಜೊತೆಗೆ ತಮ್ಮ ವೈಯಕ್ತಿಕ ಶತಕ ಸಾಧನೆಯನ್ನೂ ಮಾಡಿದರು. ಇನ್ನೊಂದು ತುದಿಯಲ್ಲಿದ್ದ ಆವೇಶ್ಖಾನ್ರಿಗೆ ಬ್ಯಾಟ್ ಮಾಡಲು ಅವಕಾಶ ನೀಡದೇ, ತಾವೇ ಗೆಲುವಿನ ಶಾಸ್ತ್ರ ಮುಗಿಸಿದರು.
ಕೊನೆಯವರೆಗೂ ಹೋರಾಡಿದ ಇಂಗ್ಲೆಂಡ್ ಆಟಗಾರ ಬಟ್ಲರ್ 60 ಎಸೆತಗಳಲ್ಲಿ 107 ರನ್ ಬಾರಿಸಿದರು. ಇದರಲ್ಲಿ 6 ಸಿಕ್ಸರ್ 9 ಬೌಂಡರಿಗಳಿದ್ದವು. ಟೂರ್ನಿಯಲ್ಲಿ ಇದು ಅವರ ಎರಡನೇ ಶತಕವಾಗಿದೆ. ಉಳಿದ ಆಟಗಾರರಿಂದ ದೊಡ್ಡ ಸಾಥ್ ಸಿಗದಿದ್ದರೂ, ರಿಯಾನ್ ಪರಾಗ್ 34, ರೋವ್ಮನ್ ಪರಾಗ್ 26, ಯಶಸ್ವಿ ಜೈಸ್ವಾಲ್ 19 ರನ್ ಕಾಣಿಕೆ ನೀಡಿದರು.
6ನೇ ಗೆಲುವು, ಪಟ್ಟಿಯಲ್ಲಿ ಟಾಪ್: ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರದರ್ಶನ ಶ್ರೇಷ್ಠವಾಗಿದೆ. ಆಡಿದ 7 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ಕಂಡು 1 ರಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ 12 ಪಾಯಿಂಟ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಬಟ್ಲರ್, ಪರಾಗ್, ಜೈಸ್ವಾಲ್, ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಲಯದಲ್ಲಿದ್ದಾರೆ.
ವ್ಯರ್ಥವಾದ ಸುನಿಲ್ ನರೈನ್ ಶತಕ: ಇದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸುನಿಲ್ ನರೈನ್ ಭರ್ಜರಿ ಶತಕ ಸಿಡಿಸಿದರು. ಸ್ಪಿನ್ನರ್ ಆಗಿದ್ದರೂ, ತಂಡದ ಮೆಂಟರ್ ಗೌತಮ್ ಗಂಭೀರ್ ಅವರ ಇಚ್ಚೆಯಂತೆ ಆರಂಭಿಕನಾಗಿ ಆಡುತ್ತಿರುವ ನರೈನ್ ಯಶಸ್ಸು ಕಂಡಿದ್ದಾರೆ. 6 ಸಿಕ್ಸರ್ 13 ಬೌಂಡರಿ ಸಮೇತ 56 ಎಸೆತಗಳಲ್ಲಿ 109 ರನ್ ಗಳಿಸಿದರು. ಇದು ಅವರ ವೈಯಕ್ತಿಕ ಮೊದಲ ಶತಕವಾಗಿದೆ. ಜೊತೆಗೆ ತಂಡದ ಪರವಾಗಿ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಮಾಜಿ ಆಟಗಾರ ಮೆಕ್ಕಲಂ, ವೆಂಕಟೇಶ್ ಅಯ್ಯರ್ ಈ ಸಾಧನೆ ಮಾಡಿದ್ದರು. 18 ವರ್ಷದ ಯುವ ಕ್ರಿಕೆಟಿಗ ಆಂಕೃಷ್ ರಘುವಂಶಿ 30, ರಿಂಕು ಸಿಂಗ್ 20, ರಸೆಲ್ 13 ರನ್ ಕಾಣಿಕೆ ನೀಡಿದರು. ಇದರಿಂದ ತಂಡ 6 ವಿಕೆಟ್ಗೆ 223 ರನ್ ಗಳಿಸಿತು.
ಇದನ್ನೂ ಓದಿ: KKR vs RR: IPLನಲ್ಲಿ ಮೊದಲ ಶತಕ ಸಿಡಿಸಿದ ಸುನಿಲ್ ನರೈನ್; ರಾಜಸ್ಥಾನಕ್ಕೆ 222 ರನ್ ಗುರಿ - KKR VS RR