ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2025 (ಐಪಿಎಲ್) ಆರಂಭಕ್ಕೂ ಮುನ್ನ ನಡೆಯಲಿರುವ ಆಟಗಾರರ ಮೆಗಾ ಹರಾಜಿನ ಮೇಲೆ ಕ್ರಿಕೆಟ್‌ಪ್ರಿಯರು ಕಣ್ಣಿಟ್ಟಿದ್ದಾರೆ. ಫ್ರಾಂಚೈಸಿಗಳು ಯಾವ ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲಿವೆ ಮತ್ತು ತಂಡದಿಂದ ಯಾರನ್ನು ಕೈ ಬಿಡಲಿವೆ, ಯಾರಿಗೆ ಮಣೆ ಹಾಕಲಿವೆ ಎಂದು ತಿಳಿಯಲು ಕ್ರೀಡಾಭಿಮಾನಿಗಳು ಕಾತುರರಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಹರಾಜಿನ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ.
ಇದಕ್ಕೂ ಮುನ್ನ ಕೆಕೆಆರ್ ತಂಡದ ಸ್ಪೋಟಕ ಬ್ಯಾಟರ್ ಫ್ರಾಂಚೈಸಿಗೆ ದೊಡ್ಡ ಸುಳಿವು ನೀಡಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಕೆಕೆಆರ್ ತಂಡ ತಮ್ಮನ್ನು ತಂಡದಲ್ಲಿ ಉಳಿಸಿಕೊಳ್ಳದಿದ್ದರೆ, ವಿರಾಟ್ ಕೊಹ್ಲಿ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಲು ಬಯಸುತ್ತೇನೆ ಎಂದು ರಿಂಕು ಸಿಂಗ್ ತಿಳಿಸಿದ್ದಾರೆ.
ಸ್ಪೋರ್ಟ್ಸ್ ಟಾಕ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ರಿಂಕು, ಕೆಕೆಆರ್ನ ನಂತರ ತಮ್ಮ ನೆಚ್ಚಿನ ತಂಡ ಯಾವುದು ಎಂದು ಕೇಳಿದ ಪ್ರಶ್ನೆಗೆ ಆರ್ಸಿಬಿ ಎಂದು ಹೇಳಿದ್ದಾರೆ. ಜೊತೆಗೆ, ವಿರಾಟ್ ಕೊಹ್ಲಿಯೊಂದಿಗೆ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆ ಆರ್ಸಿಬಿ ಅಭಿಮಾನಿಗಳಿಗೆ ಖುಷಿ ತಂದಿದೆ. ಆರ್‌ಸಿಬಿಯ ಫಿನಿಶರ್ ಆಗಿದ್ದ ದಿನೇಶ್ ಕಾರ್ತಿಕ್ ಕಳೆದ ವರ್ಷ ನಿವೃತ್ತಿ ಪಡೆದ ನಂತರ, ಫ್ರಾಂಚೈಸಿ ಹೊಸ ಫಿನಿಶರ್‌ಗಾಗಿ ಹುಡುಕುತ್ತಿದೆ. ಒಂದು ವೇಳೆ ರಿಂಕುವನ್ನು ಕೆಕೆಆರ್ ಕೈ ಬಿಟ್ಟದ್ದೇ ಆದಲ್ಲಿ ಆರ್ಸಿಬಿಗೆ ಅತ್ಯುತ್ತಮ ಆಯ್ಕೆಯಾಗಿರಲಿದ್ದಾರೆ.
ರಿಂಕು ಅವರನ್ನು ಖರೀದಿಸಿದ ಬೆಲೆ: ಐಪಿಎಲ್ನ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿರುವ ರಿಂಕು 2018ರಲ್ಲಿ ಕೆಕೆಆರ್ 80 ಲಕ್ಷ ಮೂಲ ಬೆಲೆಗೆ ಅವರನ್ನು ಖರೀದಿಸಿತ್ತು. 2022 ಹರಾಜಿನಲ್ಲಿ ಅವರ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. 55 ಲಕ್ಷಕ್ಕೆ ತಂಡವು ಅವರನ್ನು ರಿಟೈನ್ ಮಾಡಿಕೊಂಡಿತ್ತು. ಮೊದಲಿನಿಂದಲೂ ಕೆಕೆಆರ್ ಪರ ಆಡುತ್ತಿರುವ ರಿಂಕು ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ. ಪ್ರಮುಖವಾಗಿ, 2023ರ ಹಾಗೂ ಪ್ರಸಕ್ತ ಋತುವಿನಲ್ಲಿ ತಮ್ಮ ಅಸಾಮಾನ್ಯ ಪ್ರದರ್ಶನದಿಂದ ಕೆಕೆಆರ್ ತಂಡದ ಗೆಲುವಿನಲ್ಲಿ ರಿಂಕು ಪ್ರಮುಖ ಪಾತ್ರವಹಿಸಿದ್ದಾರೆ. ಹಾಗಾಗಿ ಈ ಬಾರಿಯೂ ಕೆಕೆಆರ್ ರಿಂಕು ಅವರನ್ನು ರಿಟೈನ್ ಮಾಡಿಕೊಳ್ಳವ ಸಾಧ್ಯತೆಯೂ ಹೆಚ್ಚಿದೆ. ಒಂದು ವೇಳೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದರೂ ಭಾರಿ ಬೆಲೆ ತೆರಬೇಕಾಗಲಿದೆ.
ಐಪಿಎಲ್ ರೆಕಾರ್ಡ್: ರಿಂಕು ಸಿಂಗ್ ಅವರು ಇಲ್ಲಿಯವರೆಗೆ 45 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 40 ಇನ್ನಿಂಗ್ಸ್ಗಳಲ್ಲಿ 30.79 ಸರಾಸರಿಯಲ್ಲಿ 143.34 ಸ್ಟ್ರೈಕ್ ರೇಟ್ನೊಂದಿಗೆ 893 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಹೆಚ್ಚಾಗಿ ಡೆತ್ ಓವರ್ನಲ್ಲಿ ಕ್ರೀಸ್ಗಿಳಿಯುವ ರಿಂಕುಗೆ ಬ್ಯಾಟಿಂಗ್ ಮಾಡುವ ಅವಕಾಶ ಕಡಿಮೆ ಸಿಗುತ್ತದೆ. 67 ಅವರ ಈವರೆಗಿನ ಹೈ ಸ್ಕೋರ್ ಆಗಿದೆ. ಇನ್ನುಳಿದಂತೆ, ಮುಂದಿನ ಐಪಿಎಲ್ನಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಕಾಣಬಹುದಾಗಿದ್ದು, ಪ್ರಮುಖ ಆಟಗಾರರು ಫ್ರಾಂಚೈಸಿಗಳನ್ನು ಬದಲಿಸುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ಕಮ್ಬ್ಯಾಕ್ ಯಾವಾಗ?, ಜಯ್ ಶಾ ಹೇಳಿದ್ದೇನು? - Mohammed Shami