ನವದೆಹಲಿ: ಐಪಿಎಲ್ನಲ್ಲಿ ಈಚೆಗೆ ಬೌಲರ್ಗಳಿಗೆ ಹೆಚ್ಚು ಮನ್ನಣೆ ಸಿಗುತ್ತಿಲ್ಲ. ಹೊಡಿಬಡಿ ಆಟದಲ್ಲಿ ಬ್ಯಾಟರ್ಗಳೇ ರಾರಾಜಿಸುತ್ತಿದ್ದಾರೆ. ವಿಕೆಟ್ ಪಡೆಯಲು ಎಂತಹ ಮಾರಕ ಬೌಲರ್ ಕೂಡ ಪರದಾಡಬೇಕಿದೆ. ಕ್ರಿಕೆಟ್ನ ನಿಯಮಗಳು ಬೌಲರ್ಗಳಿಗೆ ಸಹಕಾರಿಯಾಗಿಲ್ಲ ಎಂಬ ಮಾತಿದೆ. ಇಂತೆಲ್ಲ ಲೋಪದ ನಡುವೆಯೂ ಯಶ್ ದಯಾಳ್ ಎಂಬ ಯುವ ಬೌಲರ್ ಕ್ರಿಕೆಟ್ನ ಕಣ್ಣು ಕುಕ್ಕಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಕ್ರಿಕೆಟ್ನ ಕಣ್ಮಣಿಯಾಗಿದ್ದಾರೆ.
ಅದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ. ಅಲ್ಲಿ ಎರಡು ಬದ್ಧವೈರಿಗಳಾದ ಸಿಎಸ್ಕೆ ಮತ್ತು ಆರ್‌ಸಿಬಿ ನಡುವೆ ಪಂದ್ಯ. ಪ್ಲೇಆಫ್ಗೆ ಕ್ವಾಲಿಫೈ ಆಗಲು ಇತ್ತಂಡಗಳೂ ಮದಗಜಗಳಂತೆ ಹೋರಾಟ ನಡೆಸುತ್ತಿದ್ದವು. ಕೊನೆಯ ಓವರ್ ಎಸೆಯಲು ಬಂದ ಯಶ್ ದಯಾಳ್, ಪಂದ್ಯವನ್ನು ಮಿಂಚಿನಂತೆ ಗೆಲ್ಲಿಸಿ ಆರ್ಸಿಬಿಯ ಕೋಟ್ಯಂತರ ಅಭಿಮಾನಿಗಳಿಗೆ ದಯಾಳುವಾಗಿ ಕಂಗೊಳಿಸಿದರು.
ರೋಚಕ ಪಂದ್ಯ: ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ಗೆ ಅರ್ಹತೆ ಪಡೆಯಲು 6 ಎಸೆತಗಳಲ್ಲಿ 17 ರನ್ ಅಗತ್ಯವಿದ್ದಾಗ, ಬೌಲ್ ಕೈಗೆತ್ತಿಕೊಂಡ ಯಶ್ ದಯಾಳ್ ಸುತ್ತಲೂ ಕೂಗುತ್ತಿದ್ದ ಅಭಿಮಾನಿಗಳ ಆಸೆಗೆ ನೀರೆರೆಯುವ ಕೆಲಸ ಮಾಡಬೇಕಿತ್ತು. ಮೊದಲ ಎಸೆತದಲ್ಲೇ ಧೋನಿ ಭರ್ಜರಿ ಸಿಕ್ಸರ್ ಬಾರಿಸಿದಾಗ ಎಲ್ಲರ ಎದೆ ಒಮ್ಮೆ ಧಸಕ್ ಎಂದಿತು. 5 ಎಸೆತಗಳಲ್ಲಿ 12 ರನ್. ಇನ್ನೇನು ಪಂದ್ಯ ಕೈಬಿಟ್ಟಿತು. ಪ್ಲೇಆಫ್ ಆಸೆ ನುಚ್ಚು ನೂರಾಯಿತು ಎಂದುಕೊಂಡಿದ್ದ ಅಭಿಮಾನಿಗಳಿಗೆ ಯಶ್ ದಯಾಳ್ ಕನಸಿನ ಗೆಲುವು ತಂದುಕೊಟ್ಟರು.
ಇನ್ನುಳಿದ ಐದು ಎಸೆತಗಳಲ್ಲಿ ಧೋನಿ ವಿಕೆಟ್ ಸಹಿತ ಬಿಟ್ಟುಕೊಟ್ಟಿದ್ದು ಕೇವಲ 1 ರನ್ ಮಾತ್ರ. ಇದರಿಂದ ತಂಡ 10 ರನ್ಗಳಿಂದ ಮಣಿಸಿ ರಾಜಾರೋಷವಾಗಿ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆಯಿತು. ಇದೆಲ್ಲವನ್ನೂ ಸಾಧಿಸಿ ತೋರಿಸಿದ್ದು, ಕಳೆದ ಬಾರಿಯ ಆವೃತ್ತಿಯಲ್ಲಿ ಆಘಾತಕ್ಕೆ ಸಿಲುಕಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಯಶ್ ದಯಾಳ್.
ಆರ್‌ಸಿಬಿ ಎಂದೂ ಮರೆಯದ ಗೆಲುವು ತಂದುಕೊಟ್ಟಿರುವ ಯಶ್ ದಯಾಳ್ಗೆ ಈಗ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಆದರೆ, ಈ ಆಟಗಾರ ತಂಡಕ್ಕೆ ಆಯ್ಕೆಯಾದಾಗ ಅದೆಷ್ಟೋ ಜನರು ಹೀನಾಮಾನವಾಗಿ ಜರಿದಿದ್ದರು. ಇವರಿಗೆ ಕೊಟ್ಟ 5 ಕೋಟಿ ರೂಪಾಯಿ ಆರ್‌ಸಿಬಿ ಹಾಳು ಮಾಡಿಕೊಂಡಿತು ಎಂದು ಛೇಡಿಸಿದ್ದರು.
ಟೀಕಿಸಿದವರಿಂದಲೇ ಪ್ರಶಂಸೆ: ಪಂದ್ಯದ ಬಳಿಕ ಯಶ್ ದಯಾಳ್ ಅವರ ತಂದೆ ಮಾತನಾಡಿ, 'ಆರ್‌ಸಿಬಿ ಮ್ಯಾನೇಜ್ಮೆಂಟ್ ಯಶ್ರನ್ನು 5 ಕೋಟಿಗೆ ಖರೀದಿಸಿದಾಗ 'ಹಣವನ್ನು ಚರಂಡಿಗೆ ಎಸೆದಿದೆ' ಎಂದು ಟೀಕಿಸಿದ್ದರು. ಆ ಸಮಯದಲ್ಲಿ ಎಲ್ಲರೂ ಯಶ್ರನ್ನು ತಿರಸ್ಕರಿಸಿದ್ದರು. ಈಗ ಅದೇ ಜನರು ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ ಎಂದರು.
2023 ರ ಐಪಿಎಲ್ ಆವೃತ್ತಿಯಲ್ಲಿ ಯಶ್ ದಯಾಳ್, ಕೊನೆಯ ಓವರ್ನಲ್ಲಿ ರಿಂಕು ಸಿಂಗ್ ಅವರಿಂದ ಸತತ ಐದು ಸಿಕ್ಸರ್ ಬಾರಿಸಿಕೊಂಡು ಆಘಾತ ಅನುಭವಿಸಿದ್ದರು. ಇದು ಅವರ ಕ್ರಿಕೆಟ್ ಬದುಕಿಗೆ ಮಾರಕವಾಗಿತ್ತು. ಆದರೆ, ಈ ಬಾರಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡು ಶಹಬ್ಬಾಸ್ ಎನ್ನಿಸಿಕೊಂಡಿದ್ದಾರೆ. ಇದು ಆತನ ಜೀವಮಾನದಲ್ಲಿ ಎಂದಿಗೂ ಮರೆಯದ ಪಂದ್ಯವಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: 'ದೇವರ ಪ್ಲಾನ್ ಬೇಬಿ': ಯಶ್ ದಯಾಳ್ ಅದ್ಭುತ ಬೌಲಿಂಗ್ಗೆ ರಿಂಕು ಸಿಂಗ್ ಸೆಲ್ಯೂಟ್ - Rinku Singh Post on Yash Dayal