ಜೈಪುರ: ಡೆಲ್ಲಿ ಸಂಘಟಿತ ಬೌಲಿಂಗ್ ದಾಳಿಗೆ ನಡುಗಿದ ರಾಜಸ್ಥಾನಕ್ಕೆ ಆಸರೆಯಾದ ರಿಯಾನ್ ಪರಾಗ್ ಅವರ 84 ರನ್ಗಳ ಬಲದಿಂದ ತಂಡ 186 ರನ್ಗಳ ಗುರಿ ನೀಡಿದೆ. ಮಾಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಅಬ್ಬರಿಸಿ ಅರ್ಧಶತಕ ಗಳಿಸಿದರೂ ಉಳಿದ ಬ್ಯಾಟರ್ಗಳು ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿದರು. ಹೀಗಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ರಾಜಸ್ಥಾನ ತಂಡ 185 ರನ್ಗಳನ್ನು ಪೇರಿಸಿತು.
ಡೆಲ್ಲಿ ನಾಯಕ ರಿಷಭ್ ಪಂತ್ ಆಹ್ವಾನದ ಮೇರೆಗೆ ಬ್ಯಾಟಿಂಗ್ಗೆ ಬಂದ ರಾಜಸ್ಥಾನ ತಂಡ ಆರಂಭದಲ್ಲೇ ಮರ್ಮಾಘಾತಕ್ಕೊಳಗಾಯಿತು. ಭರವಸೆಯ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ತಂಡಕ್ಕೆ ಆಸರೆಯಾಗಲಿಲ್ಲ. ಆಂಗ್ಲ ಬ್ಯಾಟರ್ ಜೋಸ್ ಬಟ್ಲರ್ ಕೂಡ ಹೆಚ್ಚು ಹೊತ್ತು ನಿಲ್ಲಿಲ್ಲ. ಬಳಿಕ ಬಂದ ರಾಜಸ್ಥಾನ ತಂಡದ ನಾಯಕ ಸಂಜು ಸಾಮನ್ಸ್ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ತಂಡದ ಮೊತ್ತ 36 ರನ್ ಆಗುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಒಂದಾದ ರಿಯಾನ್ ಪರಾಗ್ ಮತ್ತು ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ತಾಳ್ಮೆಯುಕ್ತ ಆಟವಾಡುವ ಮೂಲಕ ಕುಸಿದ ರಾಜಸ್ಥಾನವನ್ನು ಮೇಲೆತ್ತಿದರು. 54 ರನ್ಗಳ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಆಸರೆಯಾಯಿತು. ಮೂರು ಸಿಕ್ಸರ್ ಹೊಡೆದ ಆಶ್ವಿನ್ 29 ರನ್ಗಳಿಗೆ ಔಟ್ ಆದರು. ನಂತರ ಕ್ರೀಸ್ಗೆ ಬಂದ ಧ್ರುವ್ ಜುರೆಲ್ ರಿಯಾನ್ ಪರಾಗ್ಗೆ ಸಾಥ್ ನೀಡಿದರು.
ಸಿಡಿದೆದ್ದ ಪರಾಗ್ ಡೆಲ್ಲಿ ಸಂಘಟಿತ ಬೌಲಿಂಗ್ ಅನ್ನು ದಂಡಿಸಿದರು. ಕೇವಲ 45 ಚೆಂಡುಗಳನ್ನು ಎದುರಿಸಿದ ಪರಾಗ್ ಏಳು ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 84 ರನ್ ಹೊಡೆದು ಅಜೇಯರಾಗಿ ಉಳಿದರು. ಧ್ರುವ್ ಜುರೆಲ್ 20 ರನ್ ಗಳಿಸಿ ನಿರ್ಗಮಿಸಿದರು. ಕೊನೆಯಲ್ಲಿ ಕ್ರೀಸ್ಗೆ ಬಂದ ಶಿಮ್ರಾನ್ ಹೆಟ್ಮೆಯರ್ 14 ರನ್ ಬಾರಿಸಿದರು. ಈ ಮೂಲಕ ರಾಜಸ್ಥಾನ ತಂಡ 185 ರನ್ ಗಳಿಸಲು ಸಾಧ್ಯವಾಯಿತು. ಡೆಲ್ಲಿಗಾಗಿ ಖಲೀಲ್ ಆಹ್ಮದ್ ಮತ್ತು ಕುಲದೀಪ್ ಯಾದವ್ 2 ವಿಕೆಟ್ ಪಡೆದರೆ, ಮುಖೇಶ್ ಕುಮಾರ್ ಒಂದು ಹುದ್ದರಿಯನ್ನು ಕಬಳಿಸಿದರು.
ತಂಡಗಳು : ಡೆಲ್ಲಿ ಕ್ಯಾಪಿಟಲ್ಸ್ : ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಕಿ ಭುಯಿ, ರಿಷಬ್ ಪಂತ್ ( ವಿಕೀ ಮತ್ತು ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್
ರಾಜಸ್ಥಾನ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೀ ಮತ್ತು ನಾಯಕ) ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಸಂದೀಪ್ ಶರ್ಮಾ, ಅವೇಶ್ ಖಾನ್
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ಪರ 100 ಸಿಕ್ಸರ್ ಬಾರಿಸಿದ ಹಾರ್ದಿಕ್ ಪಾಂಡ್ಯ; ಹೊಸ ದಾಖಲೆ - IPL 2024