ಮುಂಬೈ (ಮಹಾರಾಷ್ಟ್ರ): ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ (55) ಹಾಗೂ ನಿಕೋಲಸ್ ಪೂರನ್ (75) ಆರ್ಷಕತ ಅರ್ಧಶತಕದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ 6 ವಿಕೆಟ್‌ಗೆ 214 ರನ್ ಕಲೆ ಹಾಕಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರಿಂದ ಮೊದಲು ಬ್ಯಾಟಿಂಗ್ ಮಾಡಿದ ಕೆ.ಎಲ್.ರಾಹುಲ್ ನೇತೃತ್ವದ ಲಖನೌ ತಂಡ ನಿಗದಿತ 20 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾಗಿ ಬಂದ ನಾಯಕ ಕೆಎಲ್ ರಾಹುಲ್, ನಂತರದಲ್ಲಿ ಬಂದ ಪೂರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.
ಈಗಾಗಲೇ ಮುಂಬೈ ಇಂಡಿಯನ್ಸ್ ತಂಡ ಲೀಗ್ನಿಂದ ಹೊರಬಿದ್ದಿದೆ. ಇಂದು ಔಪಚಾರಿಕ ಪಂದ್ಯವಾಡುತ್ತಿದೆ. ಮತ್ತೊಂದೆಡೆ, ಲಖನೌ ತಂಡಕ್ಕೆ ಪ್ಲೇ ಆಫ್ ಆಸೆ ಜೀವಂತ ಇರಿಸಿಕೊಳ್ಳಲು ಇದು ನಿರ್ಣಾಯಕ ಪಂದ್ಯವಾಗಿದೆ. ಇದುವರೆಗೆ 13 ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ನೇತೃತ್ವದ ಲಖನೌ ತಂಡ ಆರರಲ್ಲಿ ಗೆದ್ದು 12 ಅಂಕಗಳನ್ನು ಹೊಂದಿದೆ. ಸದ್ಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ 14 ಅಂಕ ಗಳಿಸಲಿದ್ದು, ಅಂಕಪಟ್ಟಿಯಲ್ಲೂ ಮೇಲೇರಲಿದೆ. ಈ ನಿಟ್ಟಿನಲ್ಲಿ ಗೆಲವಿಗಾಗಿ ಹೋರಾಟ ನಡೆಸಲಿದೆ.
ಮುಂಬೈ ತಂಡದಲ್ಲಿ ಎರಡು ಬದಲಾವಣೆ: ಟಿ20 ವಿಶ್ವಕಪ್‌ಗೆ ಮುನ್ನ ಮುಂಬೈ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದಿದ್ದಾರೆ. ಇವರ ಬದಲಿಗೆ ಹನ್ನೊಂದರ ಬಳಗದಲ್ಲಿ ಸೀಮರ್ ಅರ್ಜುನ್ ತೆಂಡೂಲ್ಕರ್ ಸ್ಥಾನ ಪಡೆದಿದ್ದಾರೆ. ಅಲ್ಲದೇ, ಗಾಯಾಳು ತಿಲಕ್ ವರ್ಮಾ ಬದಲಿಗೆ ಡೆವಾಲ್ಡ್ ಬ್ರೆವಿಸ್ ಮುಂಬೈ ತಂಡ ಸೇರಿಕೊಂಡಿದ್ದಾರೆ. ಮತ್ತೊಂದೆಡೆ, ಲಖನೌ ತಂಡದಲ್ಲೂ ಕೂಡ ಒಂದು ಬದಲಾವಣೆ ಮಾಡಲಾಗಿದೆ. ಕ್ವಿಂಟನ್ ಡಿ ಕಾಕ್ ಬದಲಿಗೆ ದೇವದತ್ ಪಡಿಕ್ಕಲ್ ತಂಡವನ್ನು ಸೇರಿದ್ದಾರೆ.
ಮುಂಬೈ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಹಾರ್ದಿಕ್ ಪಾಂಡ್ಯ (ನಾಯಕ), ನೆಹಾಲ್ ವಧೇರಾ, ರೊಮಾರಿಯೋ ಶೆಫರ್ಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಅರ್ಜುನ್ ತೆಂಡೂಲ್ಕರ್ ಮತ್ತು ನುವಾನ್ ತುಷಾರ.
ಲಖನೌ ತಂಡ: ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಅರ್ಷದ್ ಖಾನ್, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್ ಮತ್ತು ಮೊಹ್ಸಿನ್ ಖಾನ್.
ಇದನ್ನೂ ಓದಿ: IPL 2024: ಮನಬಿಚ್ಚಿ ಮಾತನಾಡಿದ ವಿರಾಟ್ ಕೊಹ್ಲಿ... ಮಗಳು ವಾಮಿಕಾ ಬಗ್ಗೆ ಅಚ್ಚರಿಯ ಸಂಗತಿ ಹೊರ ಹಾಕಿದ ಬ್ಯಾಟರ್!