ಲಖನೌ: ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕನ್ನಡಿಗ ಕೆ. ಎಲ್. ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡ ತರಬೇತುದಾರ ಸಿಬ್ಬಂದಿಯನ್ನು ಬಲಪಡಿಸಿಕೊಂಡಿದೆ.
ಸಹಾಯಕ ತರಬೇತುದಾರರನ್ನಾಗಿ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಲ್ಯಾನ್ಸ್ ಕ್ಲುಸೆನರ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಶುಕ್ರವಾರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಬಗ್ಗೆ ಎಲ್ಎಸ್ಜಿ ತಂಡವೇ ಅಧಿಕೃತವಾಗಿ ಮಾಹಿತಿ ನೀಡಿದೆ.
ಮುಂಬರುವ ಐಪಿಎಲ್ ಋತುವಿನಲ್ಲಿ ಕ್ಲೂಸೆನರ್ ಅವರು ಸಹಾಯಕ ಕೋಚ್ ಆಗಿ ತಂಡ ಸೇರಿದ್ದಾರೆ. ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಜೊತೆಗೂಡಿ ತಂಡದ ಯಶಸ್ಸಿಗಾಗಿ ಕೆಲಸ ಮಾಡಲಿದ್ದಾರೆ ಎಂದು ಲಖನೌ ಸೂಪರ್ ಜೈಂಟ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಕ್ಲೂಸೆನರ್ ವಿವರ: ದೇಶದ ಪರವಾಗಿ ಆಡಲು ಆರಂಭಿಸಿದ ಬಳಿಕ ಕ್ಲುಸೆನರ್ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು. ಅವರು 1999 ರ ವಿಶ್ವಕಪ್‌ನಲ್ಲಿ ಪಂದ್ಯಾವಳಿಯ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದ್ದರು. ಬಳಿಕ ಅವರು ಕ್ರಿಕೆಟ್ನಿಂದ ನಿವೃತ್ತಿ ಪಡೆದರು.
ಅಂತರರಾಷ್ಟ್ರೀಯ ವೇದಿಕೆಯಲ್ಲಿ, ಕ್ಲುಸೆನರ್ ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡಗಳಿಗೂ ತರಬೇತುದಾರರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಡರ್ಬನ್‌ನ ಸೂಪರ್ ಜೈಂಟ್ಸ್‌ಗೆ SA20 ಟೂರ್ನಿಯಲ್ಲಿ ಫೈನಲ್‌ಗೆ ಕೊಂಡೊಯ್ದ ತಂಡದ ಭಾಗವಾಗಿದ್ದರು.
52 ವರ್ಷದ ಕ್ಲುಸೆನರ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಈವರೆಗೂ 49 ಟೆಸ್ಟ್, 171 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಈವರೆಗೂ ಒಂದೇ ಒಂದು ಟಿ20 ಪಂದ್ಯ ಆಡಿಲ್ಲ. ಜೊತೆಗೆ ಇಂಡಿಯನ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲೂ ಭಾಗವಹಿಸಿಲ್ಲ.
ಮೊದಲ ಪಟ್ಟಿ ಬಿಡುಗಡೆ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 17ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಮಾರ್ಚ್ 22 ರಿಂದ ಚುಟುಕು ಕ್ರಿಕೆಟ್ ಪಂದ್ಯಗಳು ಆರಂಭವಾಗಲಿವೆ. ಐಪಿಎಲ್ 2024ರ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ.
ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಪಂದ್ಯಾವಳಿಯ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸದ್ಯ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಎರಡನೇ ಹಂತದ ವೇಳಾಪಟ್ಟಿಯನ್ನು ಚುನಾವಣೆ ದಿನಾಂಕ ಘೋಷಣೆ ಬಳಿಕವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮದ್ ಶಮಿ; ಐಪಿಎಲ್, ಟಿ-20 ವಿಶ್ವಕಪ್ನಿಂದ ಔಟ್?