ನವದೆಹಲಿ : ಇಂದಿನಿಂದ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಆವೃತ್ತಿ ಆರಂಭವಾಗಲಿದೆ. ಮೊದಲ ಪಂದ್ಯಕ್ಕೂ ಮುನ್ನ ವೇಗ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಮುಂಬೈ ಇಂಡಿಯನ್ಸ್ ತಂಡವನ್ನು ಶುಕ್ರವಾರ ಅಹಮದಾಬಾದ್‌ನಲ್ಲಿ ಸೇರಿಕೊಂಡಿದ್ದಾರೆ. ಈ ಹಿಂದೆಯೇ ಆರಂಭಿಸಿರುವ ಪೂರ್ವಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲು ಜಸ್ಪ್ರೀತ್ ಬುಮ್ರಾ ಅವರಿಗೆ ಸಾಧ್ಯವಾಗಿರಲಿಲ್ಲ.
ತಂಡಕ್ಕೆ ಸೇರಿದ ನಂತರ ಫ್ರಾಂಚೈಸಿ ಬುಮ್ರಾ ಅವರನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದೆ. ಬುಮ್ರಾ ಅವರ ಫೋಟೋವನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಂಹ ಘರ್ಜನೆ ಮಾಡಲು ಸಿದ್ಧ ಎಂದು ಬರೆದುಕೊಂಡಿದೆ. ಇದರ ಜೊತೆಗೆ ವೀಡಿಯೊವನ್ನು ಸಹ ಹಂಚಿಕೊಂಡಿದೆ. ಮುಂಬೈನ ಮೊದಲ ಪಂದ್ಯ ಗುಜರಾತ್ ಟೈಟನ್ಸ್ ವಿರುದ್ಧ ಮಾರ್ಚ್ 24 ರಂದು ನಡೆಯಲಿದೆ.
ಕಳೆದ ಎರಡು ಆವೃತ್ತಿಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ಮರಳಿ ಮುಂಬೈಗೆ ಆಗಮಿಸಿದ್ದು, ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಈವರೆಗೆ 16 ಆವೃತ್ತಿಯಲ್ಲಿ ಐದು ಬಾರಿ ಮುಂಬೈ ಅನ್ನು ಟ್ರೋಫಿ ಗೆಲ್ಲುವಂತೆ ಮಾಡಿದ್ದರು. ಆದರೂ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಗೆ ಹೊಸ ನಾಯಕ ಪಟ್ಟ ಕಟ್ಟಿರುವುದು ಮತ್ತೊಂದು ಕಪ್ ಮೇಲೆ ಮುಂಬೈ ಕಣ್ಣಿಟ್ಟಂತ್ತಿದೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ ಕಾರಣ ಮುಂಬೈ ಬುಮ್ರಾ ಅವರಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಐಪಿಎಲ್ನಲ್ಲಿ ಬುಮ್ರಾ 2013 ರ ಚೊಚ್ಚಲ ಪಂದ್ಯದಿಂದ ಇಲ್ಲಿಯವರೆಗೆ 7.39 ರ ಸರಾಸರಿಯಲ್ಲಿ 145 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಕ್ಕೂ ಮೊದಲು, ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ಕಳೆದ ಋತುವಿನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ನಂತರ ವಿಶ್ವಕಪ್ಗೂ ಮೊದಲು ಏಷ್ಯಾಕಪ್‌ನಲ್ಲಿ ಭಾರತದ ತಂಡ ಪ್ರಮುಖ ವೇಗದ ಬೌಲರ್ ಆಗಿ ಮಿಂಚಿದ್ದರು.
ಆ ಬಳಿಕ ಇತ್ತೀಚೆಗೆ ಮುಕ್ತಯವಾದ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ವೈಜಾಗ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಬುಮ್ರಾ ಇಂಗ್ಲೆಂಡ್‌ನ ಬ್ಯಾಟಿಂಗ್ ಲೈನ್‌ಅಪ್ ಅನ್ನು ಧೂಳಿಪಟ ಮಾಡಿ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬುಮ್ರಾ ಐಪಿಎಲ್‌ನಲ್ಲೂ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಉದ್ಘಾಟನೆ ಪಂದ್ಯ : ಐಪಿಎಲ್ ಉದ್ಘಾಟನೆ ಪಂದ್ಯಯೂ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈಗಾಗಲೇ ಎರಡು ತಂಡಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂಗೆ ಆಗಮಿಸಿವೆ.
ಇದನ್ನೂ ಓದಿ : ಇಂದಿನಿಂದ ಐಪಿಎಲ್ ಕ್ರಿಕೆಟ್ ಹಬ್ಬ: ಆರ್ಸಿಬಿ-ಸಿಎಸ್ಕೆ ನಡುವೆ ಮೊದಲ ಪಂದ್ಯ, ಅಭಿಮಾನಿಗಳ ಕಾತರ - IPL 2024