ವಾರಣಾಸಿ: ಪ್ಯಾರಿಸ್ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಆಟಗಾರ ಲಲಿತ್ ಉಪಾಧ್ಯಾಯ ಇಂದು ವಾರಣಾಸಿಗೆ ಭೇಟಿ ನೀಡಿ ತಾವು ಗೆದ್ದ ಪದಕವನ್ನು ವಿಶ್ವನಾಥನ ಚರಣಕ್ಕೆ ಅರ್ಪಿಸಿ ಪೂಜೆ ಸಲ್ಲಿಸಿದರು.
ಇದಕ್ಕೂ ಮೊದಲು ವಾರಣಾಸಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಲಲಿತ್ಗೆ ನೆರೆದಿದ್ದ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಕ್ರೀಡಾ ಪ್ರೇಮಿಗಳು ಅವರನ್ನು ಹೆಗಲ ಮೇಲೆ ಹೊತ್ತು ಹರ ಹರ ಮಹಾದೇವ್ ಎಂಬ ಘೋಷಣೆಗಳನ್ನು ಕೂಗಿದರು.
ಉತ್ತರ ಪ್ರದೇಶ ಸರ್ಕಾರದ ಸಚಿವ ರವೀಂದ್ರ ಜೈಸ್ವಾಲ್ ಮತ್ತು ಸಂಸದೆ ಪ್ರಿಯಾ ಸರೋಜ್ ಕೂಡ ವಿಮಾನ ನಿಲ್ದಾಣಕ್ಕೆ ತಲುಪಿ ಲಲಿತ್ ಉಪಾಧ್ಯಾಯ ಅವರನ್ನು ಸ್ವಾಗತಿಸಿದರು. ತಮ್ಮ ಊರಿನ ಹುಡುಗನೊಬ್ಬ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಕಾಶಿಯ ಜನತೆಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಸಂತೋಷ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಲಲಿತ್, ವಿಶ್ವಮಟ್ಟದಲ್ಲಿ ದೇಶದ ಘನತೆ ಹೆಚ್ಚುತ್ತಿದೆ. ದೇಶದ ಜನರ ಪ್ರೀತಿಯಿಂದ ಈ ಗೆಲುವು ಸಿಕ್ಕಿದೆ. ನನ್ನ ಕುಟುಂಬದವರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ‘ಹರ್ ಹರ್ ಮಹಾದೇವ್’ ಎಂದು ಪಠಿಸುವ ಮೂಲಕ ನೇರವಾಗಿ ಕಾಶಿ ವಿಶ್ವನಾಥ್ ಮಂದಿರಕ್ಕೆ ತೆರಳಿ ಅಲ್ಲಿ ತಾವು ಗೆದ್ದ ಪದಕವನ್ನು ದೇವರಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ದೇವರ ದರ್ಶನ ಪಡದ ಬಳಿಕ ಮಾತನಾಡಿದ ಲಲಿತ್, ಈ ಬಾರಿ ಪದಕದ ಬಣ್ಣ ಬದಲಾಗಿಲ್ಲ, ಮುಂದಿನ ಬಾರಿ ಪದಕದ ಬಣ್ಣ ಖಂಡಿತಾ ಬದಲಾಗಲಿದ್ದು, ವಿಶ್ವನಾಥ್ ಬಾಬಾಗೆ ಚಿನ್ನದ ಪದಕ ನೀಡುವುದಾಗಿ ತಿಳಿಸಿದರು.
ಇದೇ ವೇಳೆ ಮಗನ ಸಾಧನೆ ಕಂಡು ಪೋಷಕರು ಭಾವುಕರಾದರು. ಲಲಿತ್ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದ ಅವರ ತಾಯಿ, ಮುಂದಿನ ಬಾರಿ ಲಲಿತ್ ಚಿನ್ನದ ಪದಕವನ್ನು ದೇಶಕ್ಕೆ ಗೆದ್ದು ತರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
#WATCH | Varanasi, UP: Indian Hockey Team player Lalit Upadhyay's mother Rita Upadhyay says, " he gave me his medal and i felt a sense of achievement. i don't have words to express my emotions. lalit has become the only double-medalist from varanasi. he was welcomed so heartily by… pic.twitter.com/G3gGwORTqP
— ANI (@ANI) August 11, 2024
ಸ್ಪೇನ್ ಮಣಿಸಿದ್ದ ಭಾರತ: ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಭಾರತ ಹಾಕಿ ತಂಡ ಸೋಲನುಭವಿಸಿತ್ತು. ಈ ಸೋಲಿನೊಂದಿಗೆ ಭಾರತದ ಬೆಳ್ಳಿ ಹಾಗೂ ಚಿನ್ನದ ಪದಕ ಗೆಲ್ಲುವ ಕನಸು ಕಮರಿತು. ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಸ್ಪೇನ್ ವಿರುದ್ಧ 2-1 ಗೋಲುಗಳ ಅಂತದಿಂದ ವಿಜಯ ಸಾಧಿಸಿ ಪದಕವನ್ನು ಮುಡಿಗೇರಿಸಿಕೊಂಡಿತು. ಒಲಿಂಪಿಕ್ನಲ್ಲಿ ಭಾರತ ಕಂಚಿನ ಪದಕ ಜಯಿಸಿದ್ದು ಇದು ನಾಲ್ಕನೇ ಬಾರಿಯಾಗಿದೆ.