ಹೈದರಾಬಾದ್: 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಇಬ್ಬರ ನಡುವಿನ ಸಂಬಂಧವು ಅಷ್ಟಕ್ಕೆ ಅಷ್ಟೇ ಎಂಬ ಚರ್ಚೆ ಕ್ರಿಕೆಟ್ ಅಭಿಮಾನಿಗಳಲ್ಲಿ ಶುರುವಾಗಿತ್ತು. ಆದಾಗ್ಯೂ, 2024ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದ ವೇಳೆ ಗಂಭೀರ್ ಹಾಗೂ ಕೊಹ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದರು. ಈ ಮೂಲಕ ತಮ್ಮ ಕುರಿತಂತೆ ಎದ್ದಿದ್ದ ಚರ್ಚೆಗಳಿಗೆ ಅಂತ್ಯ ಹಾಡಿದ್ದರು. ಇದೀಗ ಕೊಹ್ಲಿ ಜೊತೆಗಿನ ಸಂಬಂಧದ ಬಗ್ಗೆ ಗಂಭೀರ್ ಖುದ್ದಾಗಿ ಮೌನ ಮುರಿದಿದ್ದಾರೆ.
ಹೌದು, ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಭಾರತದ ಆಕ್ರಮಣಕಾರಿ ಬ್ಯಾಟರ್ಗಳಾಗಿದ್ದಾರೆ. ಐಪಿಎಲ್ನಲ್ಲಿ ಕೆಕೆಆರ್ ತಂಡದ ನಾಯಕರಾಗಿ ಗಂಭೀರ್ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2024ರ ಐಪಿಎಲ್ ಆವೃತ್ತಿಯಲ್ಲಿ ಅದೇ ತಂಡ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಕೆಕೆಆರ್ ಮೂರನೇ ಪ್ರಶಸ್ತಿ ಗೆಲುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಈ ಐಪಿಎಲ್ ಪ್ರಶಸ್ತಿಯ ಯಶಸ್ಸಿನಿಂದಾಗಿಯೇ ಗಂಭೀರ್ ಹೆಸರು ಈಗ ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯ ಮುಂಚೂಣಿಗೆ ಬಂದಿದೆ.
ಇದನ್ನೂ ಓದಿ: ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಆಯ್ಕೆ?: ಬಿಸಿಸಿಐನಿಂದ ಘೋಷಣೆಯೊಂದೇ ಬಾಕಿ
ಇದೇ ವೇಳೆ, ಟೀಂ ಇಂಡಿಯಾ ಆಟಗಾರರೊಂದಿಗೆ ಗೌತಮ್ ಗಂಭೀರ್ ಸಂಬಂಧದ ಕುರಿತ ಚರ್ಚೆಯೂ ಆರಂಭವಾಗಿದೆ. ಈ ಬೆಳವಣಿಗೆಗಳ ಮಧ್ಯೆ ವಿರಾಟ್ ಕೊಹ್ಲಿ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಗಂಭೀರ್ ಮಾತನಾಡಿದ್ದಾರೆ. ''ನಮ್ಮಬ್ಬಿರ ಸಂಬಂಧದ ಬಗೆಗಿನ ಗ್ರಹಿಕೆಯು ವಾಸ್ತವದಿಂದ ದೂರವಿದೆ. ವಿರಾಟ್ ಕೊಹ್ಲಿ ಅವರೊಂದಿಗಿನ ನನ್ನ ಸಂಬಂಧವು ದೇಶಕ್ಕೆ ತಿಳಿಯಬೇಕಾಗಿಲ್ಲ. ತನ್ನನ್ನು ತಾನು ವ್ಯಕ್ತಪಡಿಸಲು ಮತ್ತು ನಮ್ಮ ಆಯಾ ತಂಡಗಳನ್ನು ಗೆಲ್ಲಲು ಸಹಾಯ ಮಾಡಲು ನನಗೆ ಎಷ್ಟು ಹಕ್ಕಿದೆಯೋ, ಅವರಿಗೂ ಅಷ್ಟೇ ಹಕ್ಕಿದೆ. ನಮ್ಮ ಸಂಬಂಧವು ಸಾರ್ವಜನಿಕರಿಗೆ ಮಸಾಲಾ ನೀಡುವುದಲ್ಲ" ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಈ ಹಿಂದೆ ಕೊಹ್ಲಿ ಸಹ ಸಂಬಂಧದ ಮಾತನಾಡಿದ್ದರು. "ನನ್ನ ವರ್ತನೆಯಿಂದ ಜನರು ತುಂಬಾ ನಿರಾಶೆಗೊಂಡಿದ್ದಾರೆ. ನಾನು ನವೀನ್ ಅವರನ್ನು (ಅಫ್ಘಾನಿಸ್ತಾನದ ಆಟಗಾರ ನವೀನ್-ಉಲ್-ಹಕ್) ತಬ್ಬಿಕೊಂಡಿದ್ದೆ. ಮರು ದಿನ ಗೌತಿ ಭಾಯ್ (ಗೌತಮ್ ಗಂಭೀರ್) ಬಂದು ನನ್ನನ್ನು ತಬ್ಬಿಕೊಂಡರು. ನಿಮ್ಮ ಮಸಾಲಾ ಮುಗಿದಿದೆ. ಆದ್ದರಿಂದ ನೀವು ಬೊಬ್ಬೆ ಹೊಡೆಯುತ್ತಿದ್ದೀರಿ. ನಾವೇನು ಇನ್ನು ಮಕ್ಕಳಲ್ಲ'' ಎಂದು ಕಾರ್ಯಕ್ರಮವೊಂದರಲ್ಲಿ ವಿರಾಟ್ ಹೇಳಿದ್ದರು.
ಇದನ್ನೂ ಓದಿ: 'ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ': ದಾದಾ ಪೋಸ್ಟ್ನ ಗುಟ್ಟೇನು?