ಹೈದರಾಬಾದ್: ಭಾರತ ಕ್ರಿಕೆಟ್ ವಿಶ್ವಖ್ಯಾತಿಯ ಬ್ಯಾಟರ್ಗಳನ್ನು ಕಂಡಿದೆ. ಬೌಲಿಂಗ್ ವಿಭಾಗದಲ್ಲಿ ತುಸು ಹಿಂದಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಬೌಲಿಂಗ್ ವಿಭಾಗವೂ ಬಲಿಷ್ಠವಾಗುತ್ತಿದೆ. ಯುವ ಬೌಲರ್‌ಗಳ ಪಡೆಯೇ ಇದೆ ಎಂದು ಭಾರತದ ಮಾಜಿ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹೇಳಿದ್ದಾರೆ.
'ಈಟಿವಿ ಭಾರತ್' ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಟಿ20 ವಿಶ್ವಕಪ್ ವಿಜೇತ ತಂಡದ ಬೌಲಿಂಗ್ ಕೋಚ್ ಆಗಿದ್ದ ಪಾರಸ್ ಅವರು, ಬೌಲಿಂಗ್ ಪಡೆಯಲ್ಲಿ ಪ್ರತಿಭೆಗಳ ದಂಡೇ ಇದೆ. ಸ್ಪಿನ್ನರ್ಗಳ ಜೊತೆಗೆ ವೇಗಿಗಳು ಕೂಡ ಹುಟ್ಟಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್ನಿಂದ ಹಲವಾರು ಜನರು ಅಂತಾರಾಷ್ಟ್ರಿಯ ಕ್ರಿಕೆಟ್ ಕದ ತಟ್ಟುತ್ತಿದ್ದಾರೆ ಎಂದು ಹೇಳಿದರು.
ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದ 52 ವರ್ಷದ ಮಾಂಬ್ರೆ, ಜೂನಿಯರ್ ಕ್ರಿಕೆಟರ್ಗಳಿಗೆ ತರಬೇತಿ ಪ್ರಾರಂಭಿಸಿದಾಗ, ಬೌಲಿಂಗ್ ಪಡೆಯನ್ನು ಬಲಿಷ್ಠ ಮಾಡುವ ಗುರಿ ಹೊಂದಲಾಗಿತ್ತು. ಇದೀಗ ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳ ಬೆಂಚ್ ದೊಡ್ಡದಾಗಿದೆ. ಇದು ಭಾರತೀಯ ಕ್ರಿಕೆಟ್ಗೆ ಉತ್ತಮ ಶಕುನವಾಗಿದೆ ಎಂದರು.
ಯುವ - ಅನುಭವಿ ಪಡೆ: ಯುವ ವೇಗಿಗಳಾದ ಆವೇಶ್ ಖಾನ್, ಖಲೀಲ್ ಅಹ್ಮದ್, ಅರ್ಷದೀಪ್ ಸಿಂಗ್, ಮೊಹಮದ್ ಸಿರಾಜ್ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಇದ್ದಾರೆ. ಜೊತೆಗೆ ದೇಶಿ ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿರುವ ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ಮತ್ತು, ಹರ್ಷಿತ್ ರಾಣಾ, ಕುಲದೀಪ್ ಸೆನ್ ಕೂಡ ಭವಿಷ್ಯ ತಾರೆಗಳು ಎಂದು ಅವರ ಅಭಿಪ್ರಾಯಪಟ್ಟರು.
ಯುವ ವೇಗಿಗಳಿಗೆ ಹೆಚ್ಚಿನ ಅವಕಾಶ ನೀಡಬೇಕು. ಒತ್ತಡದಲ್ಲಿ ಮತ್ತು ವಿಭಿನ್ನ ಸನ್ನಿವೇಶಗಳು, ಸಂದರ್ಭಗಳನ್ನು ಎದುರಿಸುವ ಚಾಕಚಕ್ಯತೆ ಅವರಲ್ಲಿ ಬರುತ್ತದೆ. ಇದರಿಂದ ಅವರು ಬಲಿಷ್ಠ ಆಟಗಾರರಾಗಿ ಬೆಳೆಯಲಿದ್ದಾರೆ. ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಅವರು ತಿಳಿಸಿದರು.
ವಿಶ್ವಕಪ್ ಗೆಲುವು ಅದ್ಭುತ: ತಮ್ಮ ಬೌಲಿಂಗ್ ಕೋಚಿಂಗ್ನಲ್ಲಿ ಟಿ-20 ವಿಶ್ವಕಪ್ ಗೆಲುವು ಸಾಧಿಸಿದ್ದು, ವಿಶೇಷ ಕ್ಷಣ. ಅಧಿಕಾರವಧಿಯನ್ನು ಈ ರೀತಿಯಾಗಿ ಮುಗಿಸುವುದು ಹೆಮ್ಮೆಯ ಸಂಗತಿ. ಕ್ರಿಕೆಟ್ ಬದುಕಿನಲ್ಲಿ ತರಬೇತುದಾರರಾಗಿ, ಟೀಮ್ ಇಂಡಿಯಾ ಜೊತೆಗೆ ಪಯಣ ಮಾಡಿದ್ದು, ಅದ್ಭುತ ಮತ್ತು ತೃಪ್ತಿಕರವಾಗಿದೆ ಎಂದರು.
ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಬೌಲಿಂಗ್ ಅನ್ನು ಮಹಾಂಬ್ರೆ ಶ್ಲಾಘಿಸಿದರು. ಟಿ 20 ವಿಶ್ವಕಪ್ ಗೆಲುವಿನಲ್ಲಿ ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 19 ವರ್ಷದೊಳಗಿನ ಅವಧಿಯಿಂದಲೂ ನಾನು ಅರ್ಷದೀಪ್ ಸಿಂಗ್ರನ್ನು ನೋಡುತ್ತಾ ಬಂದಿದ್ದೇನೆ. 2018 ರಲ್ಲಿ ಅವರನ್ನು ನಾನು ಮೊದಲು ಭೇಟಿಯಾಗಿದ್ದೆ. ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದಾಗಲೂ ನಾವು ಪ್ರಶಸ್ತಿ ಗೆದ್ದಿದ್ದೇವೆ ಎಂದು ನೆನಪುಗಳನ್ನು ಸ್ಮರಿಸಿದರು.